ಶಿವಮೊಗ್ಗ: ಚುನಾವಣೆಗೆ ಮುಂಚಿತವಾಗಿಯೇ ಕಾಂಗ್ರೆಸ್ (Congress) ಸೋಲನ್ನು ಒಪ್ಪಿಕೊಂಡಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಿ.ಪಿ.ಯೋಗೇಶ್ವರ್ (C.P Yogeshwar) ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ, ಒಂದೂಕಾಲ್ ಶತಮಾನ ಇರುವ ಪಕ್ಷಕ್ಕೆ ಚನ್ನಪಟ್ಟಣದಲ್ಲಿ ನಿಲ್ಲಿಸಲು ಒಬ್ಬ ಅಭ್ಯರ್ಥಿ ಇಲ್ಲ. ಬೇರೆ ಪಕ್ಷದಿಂದ ಅಭ್ಯರ್ಥಿ ತಂದು ನಿಲ್ಲಿಸುವ ದುರ್ಗತಿ ಕಾಂಗ್ರೆಸ್‍ಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಿತಿ ಬಂದಿರೋದು ಶೋಚನೀಯ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಅವಮಾನ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಮೂರು ಕ್ಷೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಅವರ ಸಮ್ಮುಖದಲ್ಲಿ ಇಂದು (ಬುಧವಾರ) ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ವಿಚಾರವಾಗಿ ಮಂಗಳವಾರ ತಡರಾತ್ರಿ ಎರಡು ಸಲ ಮನೆಯಿಂದ ರಹಸ್ಯ ಸ್ಥಳಕ್ಕೆ ಹೋಗಿ ಯೋಗೀಶ್ವರ್ ಚರ್ಚಿಸಿದ್ದರು. ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.