ಉಡುಪಿ: ಜಿಲ್ಲೆಯ ಕಾಪು- ಪಡುಬಿದ್ರೆ ಸಮುದ್ರ ತೀರದಲ್ಲಿ ಇದ್ದಕ್ಕಿದ್ದಂತೆ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿರೋದು ಸ್ಥಳೀಯರಲ್ಲಿ ಹಾಗೂ ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ.
ಸದಾ ಆಕಾಶ ನೀಲಿ ಬಣ್ಣದಲ್ಲಿ ಕಂಗೊಳಿಸುವ ಅರಬ್ಬೀ ಸಮುದ್ರ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದೆ. ಉಡುಪಿ ಜಿಲ್ಲೆಯ ಕಾಪು- ಪಡುಬಿದ್ರೆ ವ್ಯಾಪ್ತಿಯಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೇವಲ ಸಮುದ್ರದಲ್ಲಿ ಮಾತ್ರ ನೀರು ಹಸಿರಾಗಿ ಕಾಣದೇ ಬಾಟಲಿಗೆ ತುಂಬಿದರೂ ಕೂಡಾ ನೀರು ಹಸಿರಸಿರಾಗಿಯೇ ಕಾಣಿಸುತ್ತಿದೆ. ಇದರಿಂದ ಮೀನುಗಾರರಲ್ಲಿ ಹಾಗೂ ಸಮುದ್ರ ತೀರಕ್ಕೆ ಬರುವ ಪ್ರವಾಸಿಗರಲ್ಲಿ ಆತಂಕ ಮತ್ತು ಕುತೂಹಲ ಸೃಷ್ಟಿಯಾಗಿದೆ.
ಮೀನುಗಾರರ ಪ್ರಕಾರ, ಸಾಗರದಾಳದ ಪಾಚಿ ಮೇಲಕ್ಕೆ ಬಂದಿರಬಹುದು ಆದರಿಂದ ಸಮುದ್ರದ ನೀರು ಹಸಿರಾಗಿದೆ. ವರ್ಷಕ್ಕೊಮ್ಮೆ ಕರಾವಳಿಯ ಕೆಲವು ಭಾಗದಲ್ಲಿ ಈ ರೀತಿಯಾಗಿ ನೀರು ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದ್ರೆ ಕಡು ಹಸಿರು ಬಣ್ಣಕ್ಕೆ ನೀರು ತಿರುಗಿರುವುದು ಜನರಲ್ಲಿ ಕೊಂಚ ಆತಂಕಕ್ಕೂ ಕಾರಣವಾಗಿದೆ.
ಸಮುದ್ರದ ನೀರಿನಲ್ಲಿ ನೈಟ್ರೇಟ್ ಮತ್ತು ಪ್ರಾಸ್ಟೈಟ್ ರಾಸಾಯನಿಕ ಇರುತ್ತದೆ. ನದಿ ನೀರಿನಿಂದಲೂ ಈ ಎರಡು ರಾಸಾಯನಿಕ ಸಮುದ್ರಕ್ಕೆ ಸೇರುತ್ತದೆ. ಅದು ನೀರಿನಲ್ಲಿರುವ ಡೈನೋಫ್ಲೈಜಿಲೈಟ್ಸ್ ಎಂಬ ಸೂಕ್ಷ್ಮಾಣು ಜೀವಿಗಳನ್ನು ಸೆಳೆಯುತ್ತದೆ. ಆಗ ಈ ಮೂರು ಒಟ್ಟಾಗಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲದೆ ಸಮುದ್ರದಲ್ಲಿ ಈ ರೀತಿ ಬದಲಾವಣೆ ಕಾಣಿಸಿಕೊಂಡಿರುವುದು ಮುಂದಿನ ವರ್ಷದ ಮೀನಿನ ಕ್ಷಾಮಕ್ಕೂ ಕಾರಣವಾಗಬಹುದು ಎಂದು ಹಿರಿಯ ಪರಿಸರ ತಜ್ಞ ಎನ್.ಎ ಮಧ್ಯಸ್ಥ ಪ್ರತಿಕ್ರಿಯಿಸಿದ್ದಾರೆ.
ಅದೇನೇ ಆದರೂ ಕಡಲಿನ ನೀರು ಹಸಿರಾಗಿರುವುದರಿಂದ ಕರಾವಳಿಯ ಜನ ಭಯಬಿದ್ದಿದ್ದಾರೆ. ಇಲ್ಲಿನ ಕಂಪನಿಗಳಿಂದ ಬಿಟ್ಟ ತ್ಯಾಜ್ಯ ಸಮುದ್ರಕ್ಕೆ ಸೇರಿರುವುದರಿಂದ ಹೀಗಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೀನುಗಾರಿಕಾ ಇಲಾಖೆ ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv