-ನಿಯಮ ಕಾಪಾಡಿ, ಸರ್ಕಾರಕ್ಕೆ ಸಹಕಾರ ನೀಡಿ: ಸಚಿವ ಕೋಟ ಮನವಿ
ಉಡುಪಿ: ಕೊರೊನಾ ಲಾಕ್‍ಡೌನ್ ನಡುವೆಯೂ ಮೀನುಗಾರಿಕೆಗೆ ವಿನಾಯಿತಿ ಕೊಡಲಾಗಿದೆ. ರಾಜ್ಯಾದ್ಯಂತ ಹದಿನಾಲ್ಕು ಸಾವಿರ ನಾಡ ದೋಣಿಗಳು ಏಪ್ರಿಲ್ 15ರಿಂದ ಕಸುಬು ಆರಂಭಿಸಲಿದೆ. ಆದ್ರೆ ಸಮುದ್ರದ ಮೀನು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಪೂರೈಕೆ ಆಗಲ್ಲ.
ಮೀನು ಅಗತ್ಯ ಆಹಾರ. ಸರ್ಕಾರ ಮೀನುಗಾರಿಕೆಗೆ ಕೊಟ್ಟ ವಿನಾಯಿತಿಯನ್ನು ಯಾರೂ ಕೂಡ ದುರುಪಯೋಗಪಡಿಸಿಕೊಳ್ಳಬಾರದು. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಲ್ಲಿ ಅನುಸರಿಸಬೇಕು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.
Advertisement
Advertisement
ರಾಜ್ಯಾದ್ಯಂತ ಸುಮಾರು ಹದಿನಾಲ್ಕು ಸಾವಿರ ನಾಡದೋಣಿಗಳು ಸಮುದ್ರಕ್ಕೆ ನದಿಗೆ ಮತ್ತು ಕೆರೆಗಳಿಗೆ ಇಳಿಯಲಿವೆ. ನಾಡದೋಣಿ ಮೀನುಗಾರರು ಮತ್ತು ದಡದಲ್ಲಿ ಬಲೆ ಬೀಸಿ ಹಿಡಿದ ಮೀನುಗಳು ಯಾವುದೇ ಕಾರಣಕ್ಕೂ ಬಂದರಿಗೆ ತರಕೂಡದು. ಬಂದರಿಗೆ ಮೀನು ಬಾರದೆ ಅದು ಮಾರುಕಟ್ಟೆಯಲ್ಲಿ ಮತ್ತು ಗ್ರಾಹಕರ ಮನೆ ಮನೆಗೆ ವಿಲೇವಾರಿ ಆಗಬೇಕು. ಈ ಬಗ್ಗೆ ಜಿಲ್ಲಾಡಳಿತ ಮೀನುಗಾರಿಕಾ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
Advertisement
ಮೀನನ್ನು ಗ್ರಾಹಕರಿಗೆ ಮಾರಾಟ ಮಾಡುವಾಗಲೂ ಸಾಮಾಜಿಕ ಅಂತರ ಮತ್ತು ಶುಚಿತ್ವವನ್ನು ಕಾಪಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಮೀನು ಮೂರು ಜಿಲ್ಲೆಯಲ್ಲಿ ಯಾವುದೇ ಬಂದರಿಗೆ ಬರಲ್ಲ, ಮನೆ ಮನೆಗೆ ಸಪ್ಲೈ ಆಗುತ್ತೆ ಎಂದಿದ್ದಾರೆ. ಒಳನಾಡಿನ ಮೀನುಗಾರರಿಗೂ ಮುಕ್ತ ಅವಕಾಶವಿದೆ.
Advertisement
ಆದ್ರೆ ಸದ್ಯ ಕರಾವಳಿ ಮೀನು ಬೆಂಗಳೂರಿಗೆ ರವಾನೆಯಾಗಲ್ಲ. ಜಿಲ್ಲೆಯ ಒಳಗಿನ ಗ್ರಾಹಕರ ಬೇಡಿಕೆಯನ್ನು ನಾವು ಮೊದಲು ಪೂರೈಕೆ ಮಾಡುತ್ತೇವೆ. ತರಕಾರಿ ದಿನಸಿ ವಸ್ತುಗಳು ಮಾತ್ರ ಜಿಲ್ಲೆಯ ಗಡಿಯನ್ನು ದಾಟಿ ಹೊರ ಜಿಲ್ಲೆಗೆ ಮತ್ತು ಬೆಂಗಳೂರಿಗೆ ಹೋಗಲಿದೆ. ಈ ವಸ್ತುಗಳ ಜೊತೆ ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನು ಜಿಲ್ಲಾ ಗಡಿ ದಾಟಿ ಹೊರಗೆ ಹೋಗುವುದಿಲ್ಲ. ಸಾಧಾರಣ ಒಂದು ವಾರದಲ್ಲಿ ನಮಗೆ ಪೂರ್ಣ ಚಿತ್ರಣ ದೊರೆಯಲಿದೆ. ಆ ನಂತರ ಜಿಲ್ಲಾಡಳಿತದ ಜೊತೆ ಮಾತನಾಡಿ ಮಾರ್ಗಸೂಚಿ ಸಿದ್ಧ ಮಾಡುತ್ತೇವೆ ಎಂದು ಹೇಳಿದರು.
ನಾಡದೋಣಿ ಮೀನುಗಾರರು ಮೀನುಗಾರಿಕೆ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಐದು ಜನಕ್ಕಿಂತ ಹೆಚ್ಚು ಜನ ಸಮುದ್ರಕ್ಕೆ ಹೋಗಬಾರದು. ತಮ್ಮ ಜೀವಕ್ಕೆ ಯಾವುದೇ ಅಪಾಯವನ್ನ ತಂದುಕೊಳ್ಳಬಾರದು ಎಂದು ಮೀನುಗಾರಿಕಾ ಸಚಿವರು ಸಲಹೆ ನೀಡಿದರು.