ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿರುವ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ (Gandhad Gudi) ಚಿತ್ರದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth) ಕೂಡ ಇದ್ದಾರೆ. ಚಿತ್ರ ಶುರುವಾಗುವುದು ಅಶ್ವಿನಿ ಅವರ ಮಾತಿನ ಮೂಲಕ. ಅವರು ಅಪ್ಪುವನ್ನು ಬಣ್ಣಿಸುವ ರೀತಿಯೇ ಸೊಗಸು. ಒಂದಷ್ಟು ಅಚ್ಚರಿ, ಒಂದಷ್ಟು ಭಾವುಕತೆ ಮತ್ತಷ್ಟು ಚಿತ್ರ ನೋಡುವ ಕುತೂಹಲವನ್ನು ಅಶ್ವಿನಿ ಹುಟ್ಟು ಹಾಕುತ್ತಾರೆ. ಆನಂತರ ಪುನೀತ್ ಹೊಸ ಲೋಕಕ್ಕೆ ನೋಡುಗರನ್ನು ಕರೆದುಕೊಂಡು ಹೋಗುತ್ತಾರೆ.
Advertisement
ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ
Advertisement
Advertisement
ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ (Amogha Varsha) ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.
Advertisement
ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.
ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.