ಬೆಂಗಳೂರು: ಸ್ಯಾಂಡಲ್ ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 43ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭಾಶಯ ಕೋರಿದ್ದಾರೆ.
ಯಾರಿ ನಂಬರ್ ಒನ್ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದ ಶಿವಣ್ಣ ಅವರು ಅಪ್ಪು ಮನೆಗೆ ಬಂದು ಶುಭಾಶಯ ತಿಳಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಚಿಕ್ಕ ಮಗು ತರ. ಅವನನ್ನು ನಾನು ನನ್ನ ಮಗ ಅಂದ್ರು ತಪ್ಪಾಗಲ್ಲ. ಯಾಕಂದ್ರೆ ನನಗೆ 13 ವರ್ಷವಾದಾಗ ಅಪ್ಪು ಹುಟ್ಟಿದ್ದಾನೆ. ಹೀಗಾಗಿ ಅವನನ್ನ ಚಿಕ್ಕ ಮಗುವಿನಿಂದಲೂ ನೋಡ್ತಾ ಇದ್ದೀನಿ. ಎತ್ತಿ ಆಡಿಸಿದ್ದೀನಿ. ಒಟ್ಟಿನಲ್ಲಿ ಇಂದು ಹುಟ್ಟುಹಬ್ಬ ಅಂದಾಗ ಖುಷಿಯಾಗುತ್ತದೆ ಅಂದ್ರು.
ಅಪ್ಪುಗೆ ಇಷ್ಟು ಬೇಗ 43 ವರ್ಷ ವಯಸ್ಸಾಯಿತಾ ಅಂತ ಆಶ್ಚರ್ಯವಾಗುತ್ತಿದೆ. ಹೀಗಾಗಿ ಅವನಿಗೆ ಇಷ್ಟೊಂದು ವಯಸ್ಸಾಗಿದೆ ಅಂತ ನನಗೆ ಅನಿಸೋದೇ ಇಲ್ಲ. ಇನ್ನು 20-22 ವರ್ಷದ ಹುಡುಗನ ತರ ಕಾಣ್ತಾನೆ. ಒಟ್ಟಿನಲ್ಲಿ ಇಂದು ಯುವಕರು, ಮಕ್ಕಳು, ಅಭಿಮಾನಿಗಳು ಸೇರಿದಂತೆ ಎಲ್ಲರೂ ಅವರ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುವುದನ್ನು ನೋಡಿದ್ರೆ ಹೆಮ್ಮೆ ಹಾಗೂ ಖುಷಿ ಅನಿಸುತ್ತಿದೆ ಅಂತ ಹೇಳಿದ್ರು.
ಅಪ್ಪು ತುಂಬಾ ಶ್ರಮ ಜೀವಿ. ಹೀಗಾಗಿ ಅವನ ಶ್ರಮ ಇನ್ನು ಮುಂದೆಯೂ ಹೀಗೆ ಇರುತ್ತದೆ. ಜೀವನದಲ್ಲಿ ತುಂಬಾನೆ ಕಷ್ಟ ಪಡುತ್ತಾನೆ. ಹಾಗೂ ಆತನಿಗೆ ಏನ್ ಮಾಡಬೇಕು ಎಂಬುದು ಗೊತ್ತು. ಬುದ್ಧಿವಂತ ಹಾಗೂ ಉತ್ತಮ ಮನುಷ್ಯ ಅಂತ ತಮ್ಮನ ಬಗ್ಗೆ ಅಣ್ಣ ಹೆಮ್ಮೆ ವ್ಯಕ್ತಪಡಿಸಿದ್ರು.