ವಿಜಯಪುರ: ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (Mini Planetarium) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ (Vijayapura) ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು 56.88 ಕೋಟಿ ರೂ. ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಸಚಿವ ಎಂ.ಬಿ ಪಾಟೀಲ್ (M.B. Patil) ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, `2015-16ನೇ ಸಾಲಿನ ಬಜೆಟ್‌ನಲ್ಲೇ ವಿಜಯಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರ ಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ 12.88 ಕೋಟಿ ರೂ.ಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದಿದ್ದಾರೆ.
ವಿಜಯಪುರದಲ್ಲಿ ಈ ಯೋಜನೆಯ ಕಾಮಗಾರಿಗೆ ಇದುವರೆಗೆ 1.44 ಕೋಟಿ ರೂ. ವೆಚ್ಚವಾಗಿದೆ. ತಾರಾಲಯದಲ್ಲಿ ಡೋಮ್, ಪ್ರೊಜಕ್ಷನ್ ಸಿಸ್ಟಂ, ಒಳಾಂಗಣ, ಹೊರಾಂಗಣ ವಿಜ್ಞಾನ ಪ್ರದರ್ಶಿಕೆಗಳು, ಆಡಿಯೋ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರಲಿದೆ. ಇದರ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಲಾಗುವುದು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾಗಿ ಅವರು ತಿಳಿಸಿದ್ದಾರೆ.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಮದಾಪುರದಲ್ಲಿರುವ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ವಿಜಯಪುರದಲ್ಲಿರುವ ವಸತಿಸಹಿತ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ತಲಾ 22 ಕೋಟಿ ರೂ.ಗಳಂತೆ ಒಟ್ಟು 44 ಕೋಟಿ ರೂ. ಒದಗಿಸಲು ಕೂಡ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ.
ಈ ಎರಡೂ ವಸತಿ ಶಾಲೆಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಇಲ್ಲಿ ತಲಾ 250 ರಂತೆ ಒಟ್ಟು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವು ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಹೊಸ ಕಟ್ಟಡಗಳಲ್ಲಿ ಶಾಲಾ ಕಟ್ಟಡ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಭೋಜನಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಗೃಹಗಳು, ರಂಗಮಂದಿರ, ಕಾಂಪೌಂಡ್, ಸೋಲಾರ್ ವಾಟರ್ ಹೀಟರ್, ಒಳಚರಂಡಿ ವ್ಯವಸ್ಥೆ ಮುಂತಾದವು ಇರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿರುವ 61 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಕ್ಕಾಗಿ ಒಟ್ಟು 1292.50 ಕೋಟಿ ರೂ. ಒದಗಿಸಲು ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಜಿಲ್ಲೆಯ ಈ ಎರಡು ಶಾಲೆಗಳೂ ಸೇರಿವೆ ಎಂದು ಅವರು ಹೇಳಿದ್ದಾರೆ.