– ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯದ ಟೀಂ
– ಪೊಲೀಸರ ಕರ್ತವ್ಯಕ್ಕೆ ಜನರಿಂದ ಭಾರೀ ಮೆಚ್ಚುಗೆ
ಬೆಂಗಳೂರು: ಇಬ್ಬರು ಪೊಲೀಸ್ ಹೀರೋಗಳು ಮತ್ತು ಪೊಲೀಸ್ ಸಿಬ್ಬಂದಿಯ ದಿಟ್ಟ ನಡೆಯಿಂದ ದರ್ಶನ್ (Darshan Gang) ಗ್ಯಾಂಗ್‌ನ ಕರಾಳ ಮುಖ ರಾಜ್ಯಕ್ಕೆ ಈಗ ಅನಾವರಣವಾಗಿದೆ.
ಹೌದು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ (DCP Girish), ಎಸಿಪಿ ಚಂದನ್ (ACP Chandan) ಮತ್ತು ಪೊಲೀಸ್ ಸಿಬ್ಬಂದಿ ಯಾವುದೇ ಒತ್ತಡಕ್ಕೆ ಮಣಿಯದೇ ಕರ್ತವ್ಯ ನಿರ್ವಹಿಸಿ ದರ್ಶನ್ ಮತ್ತು ಗ್ಯಾಂಗ್ ಸದಸ್ಯರನ್ನು ಹೆಡೆಮುರಿ ಕಟ್ಟಿದ್ದಾರೆ.
Advertisement
ಹೈಪ್ರೊಫೈಲ್ ಪ್ರಕರಣಗಳು ದಾಖಲಾದಾಗ ಪೊಲೀಸ್ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಬರುವುದು ಸಹಜ. ಹೀಗಿದ್ದರೂ 36 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಪೊಲೀಸರು (Police) ಎಲ್ಲಾ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ದರ್ಶನ್ ಬಂಡವಾಳ ಬಯಲು ಮಾಡಿದ್ದಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಫ್ಯಾನ್ಸ್ ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? – ದರ್ಶನ್ ಕೃತ್ಯ ಖಂಡಿಸಿದ ರಮ್ಯಾ
Advertisement
ಜೂನ್ 9 ರಂದು ಏನಾಯ್ತು?
ಜೂನ್ 9 ಭಾನುವಾರ ಬೆಳಗ್ಗೆ 8 ಗಂಟೆಗೆ ಸುಮನಹಳ್ಳಿ ಬಳಿಕ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್ ಬಳಿ ರೇಣುಕಾಸ್ವಾಮಿ (Renuka Swamy) ಮೃತದೇಹ ಪತ್ತೆಯಾಗುತ್ತದೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಎರಡು ಸ್ಕಾರ್ಪಿಯೋ ಕಾರುಗಳ ಮೇಲೆ ಅನುಮಾನ ಬರುತ್ತದೆ. ಈ ವಿಚಾರ ತಿಳಿಯುತ್ತಿದ್ದಂತೆ ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ ಅವರು ತನಿಖೆಗೆ ಇಳಿಯುತ್ತಾರೆ.
Advertisement
ಕಪ್ಪು ಮತ್ತು ಬಿಳಿ ಬಣ್ಣದ ಸ್ಕಾರ್ಪಿಯೋ ಜಾಡು ಹಿಡಿಯಲು ಕಸರತ್ತು ಆರಂಭವಾಗುತ್ತದೆ. ನಂತರ ಕಾರು ಕ್ರಮಿಸಿದ ರಸ್ತೆಯಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸೆರೆ ಹಿಡಿಯಲು ಆರಂಭಿಸುತ್ತಾರೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರ್ ಆರ್ ನಗರದ ಪಟ್ಟಣಗೆರೆ ಶೆಡ್‌ಗೆ ಕಾರು ಹೋಗುತ್ತಿರುವುದು ಗೊತ್ತಾಗುತ್ತದೆ. ನಂಬರ್ ಚೆಕ್ ಮಾಡಿದಾಗ ಈ ಕಾರು ಪ್ರದೋಷ್, ಪುನೀತ್ ಅವರಿಗೆ ಸೇರಿರುವುದು ತಿಳಿಯುತ್ತದೆ.
Advertisement
ಜೂನ್ 10 ರಂದು ಏನಾಯ್ತು?
ಸ್ಕಾರ್ಪಿಯೋ ಮಾಲೀಕರ ಕರೆ ಮಾಹಿತಿ ತೆಗೆದಾಗ ಪ್ರದೋಷ್ ಜೊತೆ ದರ್ಶನ್ ಆಪ್ತ ನಾಗ ಮಾತುಕತೆ ನಡೆಸಿದ್ದು ಗೊತ್ತಾಗುತ್ತದೆ. ಪದೇ ಪದೇ ಕಾಲ್ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ಸೋಮವಾರ ಮಧ್ಯಾಹ್ನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಮೂವರು ಬಂದು ಶರಣಾಗುವ ಮೂಲಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಗುತ್ತದೆ. ಇದನ್ನೂ ಓದಿ: ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್ ತಲೆಗೆ ತಂದಿದ್ದಾರೆ: ದರ್ಶನ್ ಅಳಲು
ಕಾರ್ತಿಕ್ ಅಲಿಯಾಸ್ ಕಪ್ಪೆ,ಕೇಶವ ಹಾಗೂ ನಿಖಿಲ್ ಶರಣಾಗಿ ಹಣಕಾಸು ವಿಚಾರಕ್ಕೆ ನಾವೇ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಗೆ ನೀಡುತ್ತಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಗಳು ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರಿಗೂ ಚಿತ್ರದುರ್ಗಕ್ಕೂ ಏನು ಸಂಬಂಧ? ಏನಿದು ಹಣಕಾಸು ಗಲಾಟೆ ಎಂದು ತಲೆ ಕೆಡಿಸಿಕೊಂಡ ಪೊಲೀಸರು ಮೂವರನ್ನು ಪ್ರತ್ಯೇಕ ಕರೆದು ವಿಚಾರಣೆ ಆರಂಭಿಸುತ್ತಾರೆ.
ಈ ವೇಳೆ ಮೂವರ ಹೇಳಿಕೆಗಳು ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಕೊನೆಗೆ ಮೂವರ ಕರೆ ಡಿಟೇಲ್ ತೆಗೆದಿದ್ದಾರೆ. ಕಾಲ್ ಲಿಸ್ಟ್‌ನಲ್ಲಿ ಪ್ರದೋಷ್ ಹಾಗೂ ದರ್ಶನ್ ಆಪ್ತ ನಾಗನ ಜೊತೆ ಇವರು ಮಾತನಾಡಿದ್ದು ಗೊತ್ತಾಗುತ್ತದೆ.
ಇಬ್ಬರು ಸ್ಕಾರ್ಪಿಯೋ ಕಾರು ಮಾಲೀಕರ ಜೊತೆಗೂ ದರ್ಶನ್ ಆಪ್ತ ನಾಗ ಮಾತನಾಡಿದ್ದಾನೆ. ಅಷ್ಟೇ ಅಲ್ಲದೇ ಶರಣಾದ ಇಬ್ಬರು ಆರೋಪಿಗಳ ಜೊತೆಗೂ ನಾಗ ಮಾತನಾಡಿದ್ದು ಖಚಿತವಾಗುತ್ತಿದ್ದಂತೆ ಪೊಲೀಸರು ತಮ್ಮ ಎಂದಿನ ತಮ್ಮ ಶೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸತ್ಯ ಬಯಲು ಮಾಡಿ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ದರ್ಶನ್ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಶಾಕ್ ಆದರೂ ಯಾವುದೇ ತೀರ್ಮಾನಕ್ಕೆ ಬಾರದೇ ಖಾಕಿ ತಂಡ ತನಿಖೆ ಮುಂದುವರಿಸಿದೆ.
ಆಳಕ್ಕೆ ಇಳಿದ ತನಿಖೆ:
ದರ್ಶನ್ ಪಾತ್ರ ಬಯಲಾಗುತ್ತಿದ್ದಂತೆ ಪೊಲೀಸರು ಮತ್ತಷ್ಟು ಆಳಕ್ಕೆ ಇಳಿದು ತನಿಖೆ ಚುರುಕುಗೊಳಿಸಿದರು. ತಕ್ಷಣಕ್ಕೆ ದರ್ಶನ್ ಬಂಧನ ಮಾಡಬೇಕಾ ಎಂದು ಪೊಲೀಸರು ಗೊಂದಲಕ್ಕೆ ಬಿದ್ದರು. ಹೇಳಿ ಕೇಳಿ ದರ್ಶನ್ ದೊಡ್ಡ ನಟ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ದರ್ಶನ್ ಬಂಧನ ಮಾಡಬೇಕಾದರೆ ಬಲವಾದ ಸಾಕ್ಷ್ಯಗಳು ಬೇಕು. ಹೀಗಾಗಿ ಆತುರಕ್ಕೆ ಒಳಗಾಗದ ಪೊಲೀಸರು ಬಲವಾದ ಸಾಕ್ಷ್ಯ ಕಲೆ ಹಾಕಲು ಮುಂದಾದರು.
ಜೂನ್ 10 ರಾತ್ರಿ ಏನಾಯ್ತು?
ಪ್ರದೋಷ್, ನಾಗ, ದೀಪಕ್ ಮೇಲೆ ಖಾಕಿ ಕಣ್ಣಿಟ್ಟಿತ್ತು. ಟವರ್ ಲೊಕೇಷನ್ ಆಧರಿಸಿ ಚಲನವಲನ ಪತ್ತೆ ಮಾಡಿ ಸೋಮವಾರ ರಾತ್ರಿ ಪೊಲೀಸರು ಫೀಲ್ಡ್‌ಗೆ ಇಳಿದರು. ಬಿಡದಿ ಬಳಿಯ ಮೈಸೂರು ಟೋಲ್ ಹತ್ತಿರ ಮೂವರನ್ನು ಸೆರೆ ಹಿಡಿದರು. ವಿಚಾರಣೆ ವೇಳೆ ಇವರು ದರ್ಶನ್, ಪವಿತ್ರಾ ಗೌಡ ಹೆಸರನ್ನು ಬಾಯಿಬಿಟ್ಟರು. ಎಲ್ಲಾ ಆರೋಪಿಗಳು ಇಬ್ಬರ ಹೆಸರನ್ನು ಹೇಳುತ್ತಿದ್ದಂತೆ ಡಿಸಿಪಿ ಗಿರೀಶ್ ಅವರು ಪ್ರಕರಣದ ವಿಚಾರವನ್ನು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದರು. ಸರ್ಕಾರದಿಂದಲೂ ಕ್ರಮಕ್ಕೆ ಸೂಚನೆ ಸಿಕ್ಕಿತು. ಮಂಗಳವಾರ ನಸುಕಿನ ವೇಳೆಯಲ್ಲೇ ಆಪರೇಷನ್ ದರ್ಶನ್ ಟೇಕಾಫ್ ಆಯ್ತು.
ಜೂನ್ 11 ರಂದು ಏನಾಯ್ತು?
ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ದರ್ಶನ್ ಮೈಸೂರಿನಲ್ಲಿದ್ದಾರೆ ಎಂದು ತಿಳಿಸಿದ್ದರು. ಶೂಟಿಂಗ್ ನಿಮಿತ್ತ ಮೈಸೂರಿಗೆ ತೆರಳಿದ್ದ ದರ್ಶನ್ ರ‍್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ತಂಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಎಸಿಪಿ ಚಂದನ್, ಭರತ್ ರೆಡ್ಡಿ, ಇನ್ಸ್ ಪೆಕ್ಟರ್ ಗಿರೀಶ್ ನಾಯಕ್ ಅವರಿದ್ದ ತಂಡ ಮಂಗಳವಾರ ಬೆಳಗ್ಗೆ 6 ಗಂಟೆಗೆ ಮೈಸೂರಿಗೆ ತಲುಪಿತ್ತು.
ಸೂಪರ್ ಆಪರೇಷನ್ ಹೇಗಾಯ್ತು?
ಬೆಳಗ್ಗೆ 6:30ಕ್ಕೆ ಹೊಟೇಲಿನಿಂದ ಹೊರ ಬಂದ ದರ್ಶನ್ ಸಮೀಪದಲ್ಲೇ ಇದ್ದ ಜಿಮ್‌ಗೆ ವರ್ಕೌಟ್ ಮಾಡಲು ತೆರಳಿದ್ದರು. ಈ ವೇಳೆ ಇಬ್ಬರು ಪೇದೆಗಳು ದರ್ಶನ್ ಮತ್ತು ತಂಡವನ್ನು ಹಿಂಬಾಲಿಸಿದ್ದರು. ಬೆಳಗ್ಗೆ 8:30ಕ್ಕೆ ಜಿಮ್‌ನಿಂದ ಹೊಟೇಲ್ ರೂಂಗೆ ದರ್ಶನ್ ವಾಪಸ್ ಆಗಿದ್ದಾರೆ.
ಆಪ್ತರು ಪೊಲೀಸ್ ಬಲೆಗೆ ಬಿದ್ದ ವಿಚಾರ ಅದಾಗಲೇ ದರ್ಶನ್‌ಗೆ ಗೊತ್ತಾಗಿತ್ತು. ಹೀಗಾಗಿ ರಾಜ್ಯದ ಇಬ್ಬರು ರಾಜಕಾರಣಿಗಳು ದರ್ಶನ್ ರಕ್ಷಣೆಗೆ ಮುಂದಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪದೇ ಪದೇ ಫೋನ್ ಮಾಡಿದ್ದರು. ಆದರೆ ಯಾವುದಕ್ಕೂ ಕೇರ್ ಮಾಡದೇ ಕರ್ತವ್ಯ ಮೊದಲು ಎಂಬ ತೀರ್ಮಾನಕ್ಕೆ ಡಿಸಿಪಿ ಗಿರೀಶ್ ಬಂದಿದ್ದರು.
ಅರೆಸ್ಟ್ ಆಗಿದ್ದು ಹೇಗೆ?
ಬೆಳಗ್ಗೆ 8:30ಕ್ಕೆ ಪೊಲೀಸರು ಹೊಟೇಲ್ ರೂಂ ಬೆಲ್ ಮಾಡಿದ್ದಾರೆ. ಪೊಲೀಸರನ್ನು ನೋಡಿದ ದರ್ಶನ್ ಒಮ್ಮೆ ಶಾಕ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿಮ್ಮ ಪಾತ್ರ ಇರುವುದು ಗೊತ್ತಾಗಿದೆ. ಬನ್ನಿ ಹೋಗೋಣ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಒಪ್ಪದ ದರ್ಶನ್ ಸ್ನಾನ ಮಾಡಿ ಬರುತ್ತೇನೆ ಎಂದಿದ್ದಾರೆ.
ಈ ವೇಳೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಬನ್ನಿ ಎಂದು ಪೊಲೀಸರು ಹೇಳಿದ್ದಕ್ಕೆ ದರ್ಶನ್, ನಾನು ನನ್ನ ಕಾರಿನಲ್ಲೇ ಬರುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಪೊಲೀಸರು, ಆಗುವುದಿಲ್ಲ ನಮ್ಮ ಜೀಪಿನಲ್ಲೇ ಬನ್ನಿ. ಜೀಪ್ ಹತ್ತಿ ಎಂದು ತಾಕೀತು ಮಾಡಿದ್ದಾರೆ. ಪೊಲೀಸರ ಖಡಕ್ ಸೂಚನೆಗೆ ಮರು ಮಾತನಾಡದೇ ದರ್ಶನ್ ಬೊಲೆರೋ ಹತ್ತಿದ್ದಾರೆ. ಇತ್ತ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಇನ್ನೊಂದು ಕಡೆಯಲ್ಲಿ ಆರ್‌ಆರ್ ನಗರದಲ್ಲಿದ್ದ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ.
ಯಾವುದೇ ಪ್ರಭಾವಕ್ಕೆ ಒಳಗಾಗದೇ ಎಲ್ಲಾ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ದರ್ಶನ್ ಮತ್ತು ಗ್ಯಾಂಗ್ ಸದಸ್ಯರನ್ನು ಬಂಧಿಸಿದ ಡಿಸಿಪಿ ಗಿರೀಶ್ ನೇತೃತ್ವದ ತಂಡಕ್ಕೆ ಈಗ ಮೆಚ್ಚುಗೆ ಮಹಾಪೂರವೇ ಬರುತ್ತಿದೆ.