ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಹಾಗೂ ನಟಿ ರಾಗಿಣಿ (Ragin) ಟೀಸರ್ ಬಿಡುಗಡೆ ಮಾಡಿದರು. ನಟಿ, ನಿರ್ದೇಶಕಿ, ನಿರ್ಮಾಪಕಿಯರಾದ ಪ್ರಿಯಾ ಹಾಸನ್ ಹಾಗೂ ರೂಪ ಅಯ್ಯರ್, ನಿರ್ದೇಶಕ ಗಡ್ಡ ವಿಜಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಲ್ಲಾ ಗಣ್ಯರು “ಆಪಲ್ ಕಟ್” ಯಶಸ್ವಿಯಾಗಲಿ ಎಂದು ಮನಸ್ಸಾರೆ ಹಾರೈಸಿದರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಚಿತ್ರದ ಟೀಸರ್ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಂತರ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, ನಾನು ಯಾರ ಬಳಿಯೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿಲ್ಲ. ನಮ್ಮ ಅಪ್ಪನ ಕಾರ್ಯವೈಖರಿ ನೋಡಿ ನನಗೆ ನಿರ್ದೇಶನದ ಆಸೆ ಹುಟ್ಟಿತ್ತು. ಕಿರುತೆರೆಯಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕಿಯಾಗಿ ಇದು ಮೊದಲ ಚಿತ್ರ. ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ‘ಆಪಲ್ ಕಟ್’, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು. ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು.
ಇನ್ನು ಚಿತ್ರವನ್ನು ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೊದಲಬಾರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಮಾರ್ಚ್ ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎಲ್ಲಾ ಗಣ್ಯರಿಗೂ ನನ್ನ ಧನ್ಯವಾದ ಎಂದರು ನಿರ್ಮಾಪಕಿ ಶಿಲ್ಪ ಪ್ರಸನ್ನ. ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ ಎಂದು ನಾಯಕ ಸೂರ್ಯ ಗೌಡ ತಿಳಿಸಿದರು.
‘ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ” ಎಂದು ನಾಯಕಿ ಅಶ್ವಿನಿ ಪೋಲೆಪಲ್ಲಿ ಹೇಳಿದರು. ಚಿತ್ರದಲ್ಲಿ ನಟಿಸಿರುವ ಅಪ್ಪಣ್ಣ, ಅಮೃತ, ಮೀನಾಕ್ಷಿ, ಬಾಲ ರಾಜವಾಡಿ ಹಾಗೂ ಸಂಗೀತ ನಿರ್ದೇಶಕ ವೀರ ಸಮರ್ಥ್ “ಆಪಲ್ ಕಟ್” ಚಿತ್ರದ ಕುರಿತು ಮಾತನಾಡಿದರು.