ನವದೆಹಲಿ: ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪೆಗಾಸಸ್‌ಗೆ ಸಂಬಂಧಿಸಿದಂತೆ ವರದಿ ಪ್ರಕಟವಾದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಗಮನದಲ್ಲಿಟ್ಟುಕೊಂಡು ವಕೀಲ ಎಂಎಲ್ ಶರ್ಮಾ ಪೆಗಾಸಸ್ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತ ಹಾಗೂ ಇಸ್ರೇಲ್ ನಡುವೆ 2017ರಲ್ಲಿ ನಡೆದ ರಕ್ಷಣಾ ಒಪ್ಪಂದದ ಸಂದರ್ಭದಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿತ್ತು. ಇದನ್ನೂ ಓದಿ: 2017ರಲ್ಲಿ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ವೇಳೆ ಪೆಗಾಸಸ್ ಖರೀದಿ – ನ್ಯೂಯಾರ್ಕ್ ಟೈಮ್ಸ್ ವರದಿ
2017ರಲ್ಲಿ ಭಾರತ 2 ಶತಕೋಟಿ ಡಾಲರ್ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಗುಪ್ತಚರ ಸಾಧನಗಳ ಒಪ್ಪಂದ ಮಾಡಿಕೊಂಡಿತ್ತು. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕು ರಕ್ಷಕರು, ರಾಜಕಾರಣಿಗಳು ಹಾಗೂ ಇತರರ ಮೇಲೆ ಕಣ್ಣಿಡಲು ಸರ್ಕಾರ ಪೆಗಾಸಸ್ ಸಾಫ್ಟ್‌ವೇರ್ ಬಳಸುತ್ತಿದೆ ಎಂದು ವರದಿಯಾಗಿದೆ.
ಯಾವುದೇ ಖಾಸಗಿ ಕಂಪನಿಗಳು ಅಥವಾ ಗುಪ್ತಚರ ಸಂಸ್ಥೆಗಳು ಮಾಡಲು ಅಸಾಧ್ಯವಾದ ಕೆಲಸವನ್ನು ಪೆಗಾಸಸ್ ಮಾಡುತ್ತದೆ. ಐಫೋನ್, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಎನ್‌ಕ್ರಿಪ್ಟ್ ಮಾಡಲಾದ ಸಂವಹನವನ್ನೂ ಪೆಗಾಸಸ್ ಯಶಸ್ವಿಯಾಗಿ ಭೇದಿಸಬಲ್ಲದು ಎಂದು ಎಂದು ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪೆಗಾಸಸ್ ಖರೀದಿಸಿ ಮೋದಿ ಸರ್ಕಾರ ದೇಶದ್ರೋಹ ಮಾಡಿದೆ: ರಾಹುಲ್ ಗಾಂಧಿ
ನ್ಯೂಯಾರ್ಕ್ ಟೈಮ್ಸ್ ವರದಿಯ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸಚಿವ ನಿವೃತ್ತ ಜನರಲ್ ವಿಕೆ ಸಿಂಗ್ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಸುಪಾರಿ ಮೀಡಿಯಾ ಎಂದು ಕರೆದು ಟೀಕಿಸಿದ್ದಾರೆ.
Can you trust NYT?? They are known ” Supari Media “. https://t.co/l7iOn3QY6q
— General Vijay Kumar Singh (@Gen_VKSingh) January 29, 2022
ಕಳೆದ ಲೋಕಸಭೆ ಅಧಿವೇಶನದ ಸಮಯದಲ್ಲೂ ಪೆಗಾಸಸ್ ವರದಿ ಬಹಳ ಸದ್ದು ಮಾಡಿತ್ತು. ಈಗ ಬಜೆಟ್ ಅಧಿವೇಶನಕ್ಕೂ ಮೊದಲು ಪೆಗಾಸಸ್‌ಗೆ ಸಂಬಂಧಿಸಿದಂತೆ ವರದಿ ಪ್ರಕಟವಾಗಿದ್ದು ಸಂಸತ್ತಿನಲ್ಲಿ ಕೋಲಾಹಲ ನಡೆಯುವ ಸಾಧ್ಯತೆಯಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಪೆಗಾಸಸ್‌ಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವರದಿಯಾಗಿದೆ.