– ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೊಳಿ ಬ್ರದರ್ಸ್
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ (Belagavi DCC Bank) ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹೊಸಬರಿಗೆ ಅವಕಾಶ ನೀಡಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಅಳೆದು ತೂಗಿ ಸರ್ವಾನುಮತದಿಂದ ಅಪ್ಪಾಸಾಹೇಬ ಕುಲಗುಡೆ (Appasaheb Kulgude) ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ನೂತನ ಅಧ್ಯಕ್ಷರ ಆಯ್ಕೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಸುಭಾಷ ಢವಳೇಶ್ವರ, ಅರವಿಂದ ಪಾಟೀಲ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಜಿಲ್ಲಾ ನಾಯಕರು, ನಿರ್ದೇಶಕರು, ಶಾಸಕರು, ಮಾಜಿ ಶಾಸಕರ ಜೊತೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ರಾಯಬಾಗ ಕ್ಷೇತ್ರದ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ. ಅದೇ ರೀತಿ ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಮುಂದುವರಿಯಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: MUDA Scam | ಬ್ಲ್ಯಾಕ್‌ಮೇಲ್ ಆರೋಪ – ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್
Advertisement
Advertisement
ತಮ್ಮ ನೇತೃತ್ವದಲ್ಲಿ ನಡೆದ ಸಭೆಗೆ ರಮೇಶ್ ಕತ್ತಿ ಗೈರಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಕತ್ತಿ ಅವರು ಕೂಡ ನೇರವಾಗಿ ಬ್ಯಾಂಕ್ ಸಭೆಗೆ ಬರಲಿದ್ದಾರೆ. ಈ ಆಯ್ಕೆ ಹಿಂದೆ ಯಾವುದೇ ತಂತ್ರಗಾರಿಕೆ ಇಲ್ಲ. ಶಾಂತಿಯಿಂದ ಚುನಾವಣೆ ನಡೆಯಬೇಕು ಎನ್ನುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದರು.
Advertisement
ಜಾರಕಿಹೊಳಿ ಮೂವರು ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಮೂವರಿಗೂ ಒಬ್ಬೊಬ್ಬರು ಅಭ್ಯರ್ಥಿಗಳು ಇದ್ದರು. ಒಬ್ಬರನ್ನೇ ಆಯ್ಕೆ ಮಾಡಬೇಕಿದ್ದರಿಂದ ಮೂವರು ಒಂದು ಕಡೆ ಸೇರಬೇಕಾಯಿತು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
Advertisement
ನೂತನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ನಿಮ್ಮ ಆಪ್ತರು ಎಂಬ ಪ್ರಶ್ನೆಗೆ ಲಕ್ಷ್ಮಣ ಸವದಿ, ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಪ್ರಕಾಶ ಹುಕ್ಕೇರಿ ಸೇರಿ ಎಲ್ಲರ ಅಭ್ಯರ್ಥಿ ಅವರು ಎಂದು ಉತ್ತರಿಸಿದರು.