ಮಡಿಕೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಶಾಸಕ ಅಪ್ಪಚ್ಚು ರಂಜನ್ ಆಪ್ತ ಎಂದು ತಿಳಿದುಬಂದಿದೆ.
ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಸಂಪತ್ ಮೊಟ್ಟೆ ಎಸೆದಿದ್ದನು. ಈ ಪ್ರಕರಣ ಎಕ್ಸ್‌ಕ್ಲೂಸಿವ್ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ಸಿಗರೇ – ಅಪ್ಪಚ್ಚು ರಂಜನ್
ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ಸಂಪತ್ ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯುತ್ತಿದ್ದಂತೆಯೇ ಹಲವಾರು ಪ್ರತಿಭಟನೆಕಾರರನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್ ಸ್ಥಳದಲ್ಲಿಯೇ ಬಂಧಿಸಿದ್ದರು. ಆದರೆ ಅಂದೇ ರಾತ್ರಿ ಜಾಮೀನು ನೀಡಿ ಬಿಜೆಪಿ ಕಾರ್ಯಕರ್ತರನ್ನು ಶಾಸಕ ಅಪ್ಪಚ್ಚು ರಂಜನ್ ಬಿಡಿಸಿದ್ದರು. ಅಲ್ಲದೇ ಕಾಂಗ್ರೆಸ್ ಅನಗತ್ಯವಾಗಿ ಬಿಜೆಪಿ ವಿರುದ್ಧ ಆರೋಪ ಹೊರಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಮೊಟ್ಟೆ ಎಸೆದವನು ಕಾಂಗ್ರೆಸ್ ಪಕ್ಷದವನೇ. ಆದರೆ ಸ್ಥಳದಿಂದ ಆತ ಪರಾರಿಯಾಗಿದ್ದ ಎಂದು ಆರೋಪಿಸಿದ್ದರು.
ಇದೀಗ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಸಂಪತ್ ಎಂಬ ಸತ್ಯ ಬಯಲಾಗಿದ್ದು, ಸಂಪತ್ ಹಾಗೂ ಅಪ್ಪಚ್ಚು ರಂಜನ್ ಜೊತೆಗೆ ಇರುವ ಫೋಟೋಗಳು ವೈರಲ್ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸಂಪತ್ ಸೋಮವಾರಪೇಟೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದನು. ನಂತರ ಗುತ್ತಿಗೆ ಕೆಲಸಗಳಿಗೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಜೊತೆ ಸಂಪರ್ಕ ಹೊಂದಿದ್ದನು. ಈ ಹಿಂದೆ ಸಂಪತ್ತು ಕಾಂಗ್ರೆಸ್‌ನಲ್ಲಿದ್ದ ಫೋಟೋಗಳು ಕೂಡ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ – ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ
ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರನ್ನು ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು. ಅಲ್ಲದೇ ಇದೇ ವೇಳೆ ವ್ಯಕ್ತಿಯೊಬ್ಬ ಕಾರಿಗೆ ಮೊಟ್ಟೆ ಎಸೆದಿದ್ದನು. ಈ ಕುರಿತಂತೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.