ಲಕ್ನೋ: ಮನೇಲಿ ಗಂಡನಿಲ್ಲದಾಗ ಸೊಸೆ ಹಾಗೂ ಬಾಡಿಗೆದಾರನ ನಡುವೆ ನಡೆಯುತ್ತಿದ್ದ ಲವ್ವಿಡವ್ವಿಯನ್ನು ವಿರೋಧಿಸಿದ ಅತ್ತೆಯನ್ನು ಚಟ್ಟಕ್ಕೇರಿಸಿದ ಘಟನೆ ಲಕ್ನೋದ (Lucknow) ನಿಶಾತ್ಗಂಜ್ನಲ್ಲಿ ನಡೆದಿದೆ.
ಹಂತಕ ಪ್ರೇಮಿಗಳನ್ನು ಸೊಸೆ ರಂಜನಾ ಮತ್ತು ಬಾಡಿಗೆದಾರ (Tenant) ರಾಜನ್ ಎಂದು ಗುರುತಿಸಲಾಗಿದ್ದು, ಇಬ್ಬರು ಸೇರಿಕೊಂಡು ಅತ್ತೆ ನಿರ್ಮಲಾ ದೇವಿ (69) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ನ್ಯೂಯಾರ್ಕ್ನಲ್ಲಿ ಲ್ಯಾಂಡಿಂಗ್ ವೇಳೆ ಟ್ರಕ್ಗೆ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ಡಿಕ್ಕಿ – ಇಬ್ಬರು ಸಾವು
ಕೊಲೆಯಾದ ನಿರ್ಮಲಾ ದೇವಿ ಅವರು ತಮ್ಮ ಮಗ ತ್ರಿದೇಶ್, ಸೊಸೆ ರಂಜನಾ ಹಾಗೂ ಮೂವರು ಮೊಮ್ಮಕ್ಕಳೊಂದಿಗೆ ಲಕ್ನೋದ ನಿಶಾತ್ಗಂಜ್ನಲ್ಲಿರುವ ತಮ್ಮ ಎರಡು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮೊದಲ ಮಹಡಿಯನ್ನು ಆರೋಪಿ ರಾಜನ್ಗೆ ಬಾಡಿಗೆಗೆ ಕೊಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ಅಲ್ಲೇ ವಾಸವಾಗಿದ್ದ ಎಂದು ತಿಳಿದುಬಂದಿದೆ.
ಬಾಡಿಗೆಗೆ ಬಂದ ಸ್ವಲ್ಪ ಸಮಯದ ನಂತರ ರಾಜನ್ ಹಾಗೂ ರಂಜನಾ ನಡುವೆ ಸಂಬಂಧ ಶುರುವಾಗಿತ್ತು. ಇದರಿಂದ ರಂಜನಾ ಹಾಗೂ ತ್ರಿದೇಶ್ ನಡುವೆ ಆಗಾಗ ಜಗಳವಾಗುತ್ತಿತ್ತು. ಅದಾದ ಸ್ವಲ್ಪ ಸಮಯದ ಬಳಿಕ ರಾಜನ್ ಹಾಗೂ ರಂಜನಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾಗಿತ್ತು. ವಿರೋಧದ ನಡುವೆಯೂ ಅವರಿಬ್ಬರ ಸಂಬಂಧ ಮುಂದುವರೆದಿತ್ತು. ಮಗ ತ್ರಿದೇಶ್ ಮನೆಯಲ್ಲಿ ಇಲ್ಲದೇ ಇರುವಾಗ ಆರೋಪಿಗಳಿಬ್ಬರು ಭೇಟಿಯಾಗುತ್ತಿದ್ದರು. ಇದನ್ನು ಅತ್ತೆ ನಿರ್ಮಲಾ ವಿರೋಧಿಸಿದ್ದರು.
ಇದರಿಂದ ಕೆರಳಿದ ಸೊಸೆ ಹಾಗೂ ಪ್ರಿಯಕರ ಅತ್ತೆಯ ಕೊಲೆಗೆ ಸಂಚು ಹೂಡಿದ್ದರು. ಅದರಂತೆ ಶನಿವಾರ (ಮಾ.21) ಪ್ರೇಮಿಗಳಿಬ್ಬರು ಅತ್ತೆಯ ಕೈಗಳನ್ನು ಮೇಲಕ್ಕೆ ಕಟ್ಟಿ, ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಮೈಮೇಲಿದ್ದ ಒಡವೆಗಳನ್ನು ಕಳ್ಳತನ ಮಾಡಿ, ಬಚ್ಚಿಟ್ಟಿದ್ದಾರೆ. ಘಟನೆಯ ಬಳಿಕ ಆರೋಪಿತೆ ರಂಜನಾಳ ಮಗ ಆದಿತ್ಯ (14) ಕೊಲೆಯಾದ ಅಜ್ಜಿಯನ್ನು ಕಂಡು, ಕೂಡಲೇ ತಂದೆ ತ್ರಿದೇಶ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಸಂಬಂಧ ತ್ರಿದೇಶ್ ದೂರು ನೀಡಿದ್ದು, ತಮ್ಮ ಪತ್ನಿ ಹಾಗೂ ಬಾಡಿಗೆದಾರ ಅಕ್ರಮ ಸಂಬಂಧ ಹೊಂದಿದ್ದು, ಅವರಿಬ್ಬರ ಭೇಟಿಗೆ ವಿರೋಧಿಸಿದಾಗ ತನ್ನ ತಾಯಿಯನ್ನು ಕೊಂದಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮೃತರ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಸ್ನಿಫರ್ ನಾಯಿ ರಾಜನ್ನ್ನು ಗುರುತಿಸಿದೆ. ಆದರೆ ರಾಜನ್ ಮಾಧ್ಯಮಗಳೊಂದಿಗೆ ಮಾತನಾಡುವಾಗ ಘಟನೆ ವೇಳೆ ತಾನು ಮನೆಯಲ್ಲಿರಲಿಲ್ಲ ಎಂದು ಹೇಳಿದ್ದಾನೆ. ಬಳಿಕ ಆರೋಪಿಗಳಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.ಇದನ್ನೂ ಓದಿ: ಕೆಲಸ ಕೊಡಿಸೋದಾಗಿ 25 ಕೋಟಿ ವಂಚನೆ – ಜಡ್ಜ್ ಸಹಿಯನ್ನೇ ನಕಲು ಮಾಡಿದ ಖತರ್ನಾಕ್ ದಂಪತಿ ಅರೆಸ್ಟ್

