ಪತಿಯನ್ನ ಪತ್ನಿ ನದಿಗೆ ತಳ್ಳಿದ್ದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ – ಪತಿ ವಿರುದ್ಧ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲು

Public TV
1 Min Read

ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ನಡೆದಿದ್ದ ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ತಾತಪ್ಪ ವಿರುದ್ದ ಪ್ರಕರಣ ದಾಖಲಾಗಿದೆ.

15 ವರ್ಷ, 8 ತಿಂಗಳ ಅಪ್ರಾಪ್ತೆಯನ್ನ ತಾತಪ್ಪ ಬಾಲ್ಯ ವಿವಾಹವಾಗಿರುವುದು ದೃಢವಾದ ಹಿನ್ನೆಲೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ತಾತಪ್ಪ ಹಾಗೂ ಆತನ ತಾಯಿ ಮತ್ತು ಅಪ್ರಾಪ್ತೆಯ ತಾಯಿ ಸೇರಿ ಒಟ್ಟು ಮೂರು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಕೇಸ್‌ಗೆ ಟ್ವಿಸ್ಟ್‌ – 16ರ ಬಾಲಕಿ ಮದುವೆಯಾಗಿದ್ದ ತಾತಪ್ಪ

ಜುಲೈ 19 ರಂದು ತಾತಪ್ಪನ ಕುಟುಂಬಸ್ಥರ ವಿಚಾರಣೆ ನಡೆಸಿದ್ದ ಅಧಿಕಾರಿಗಳ ತಂಡ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಶಾಲಾ ದಾಖಲಾತಿ ಪರಿಶೀಲನೆ ವೇಳೆ ಅಪ್ರಾಪ್ತೆ ವಯಸ್ಸು ಬೆಳಕಿಗೆ ಬಂದಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ರಾಯಚೂರು ಹಾಗೂ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರಕರಣ ದಾಖಲಿಸಲು ಸೂಚನೆ ನೀಡಿತ್ತು. ಈಗ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ. ದೇವಸುಗೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ದೂರು ದಾಖಲಿಸಿದ್ದಾರೆ.

ಯುವಕನ ಮನೆಯವರಿಗೆ ಅಪ್ರಾಪ್ತೆ ವಯಸ್ಸಿನ ಬಗ್ಗೆ ಸೂಕ್ತ ದಾಖಲೆಗಳನ್ನ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ, ದಾಖಲೆಗಳನ್ನ ಸಲ್ಲಿಸಿದ ಹಿನ್ನೆಲೆ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಯಾದಗಿರಿ ಮಕ್ಕಳಾ ರಕ್ಷಣಾ ಘಟಕದಿಂದ ಈಗಾಗಲೇ ಅಪ್ರಾಪ್ತೆಯ ರಕ್ಷಣೆ ಮಾಡಲಾಗಿದ್ದು, ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಅಪ್ರಾಪ್ತೆಯನ್ನ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಯಚೂರು ಮಹಿಳಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

Share This Article