ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ – ನಿಮ್ಮ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

Public TV
8 Min Read

ಬೆಂಗಳೂರು: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾರಿಗೆ ನೌಕರರು (Transport Employees Strike) ಮುಷ್ಕರಕ್ಕಿಳಿದಿದ್ದಾರೆ. ಈ ಹಿನ್ನೆಲೆ ರಾಜ್ಯಾದ್ಯಂತ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾವ ಜಿಲ್ಲೆಯ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೋಡೋಣ…

ಮೈಸೂರು
ಮೈಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ಈಗ ಖಾಸಗಿ ಬಸ್ ಗಳು ಎಂಟ್ರಿಯಾಗಿವೆ. ಮೈಸೂರಿನ ವಿವಿಧ ತಾಲೂಕು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರಿಗೆ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಖಾಸಗಿ ಬಸ್‌ಗಳು ಅಧಿಕೃತ ವಾಗಿ ಸಬ್‌ ಅರ್ಬನ್‌ ನಿಲ್ದಾಣದ ಒಳ ಭಾಗದಿಂದಲೇ ಸಂಚಾರ ಆರಂಭಿಸಿವೆ.

ಹಾಸನ
ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ತೆರಳುವವರು ಬಸ್‌ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಕೆಎಸ್‌ಆರ್‌ಟಿಸಿ ಘಟಕ-1 ಹಾಗೂ ಘಟಕ-2 ರಲ್ಲಿ 230 ಬಸ್‌ಗಳು ನಿಂತಿವೆ. ಅತ್ತ ಪ್ರಯಾಣಿಕರಿಗೆ ಹೊರೆ ತಪ್ಪಿಸಲು ಮುಂದಾಗಿರುವ ಖಾಸಗಿ ಬಸ್‌ಗಳು ನಿಲ್ದಾಣದ ಮುಂಭಾಗದಲೇ ನಿಂತಿವೆ. ತುರ್ತು ಅಗತ್ಯಗಳಿಗೆ ಜನ ಖಾಸಗಿ ಬಸ್‌ಗಳ ಮೊರೆ ಹೋಗುತ್ತಿದ್ದಾರೆ.

ಧಾರವಾಡ:
ಸಾರಿಗೆ ಸಂಸ್ಥೆ ನೌಕರರು ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದು, ಧಾರವಾಡದಲ್ಲೂ ಈ ಮುಷ್ಕರದ ಬಿಸಿ ತಟ್ಟಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಬಿಆರ್‌ಟಿಎಸ್ ಸಂಸ್ಥೆಯ ಬಸ್‌ಗಳೂ ರಸ್ತೆಗಿಳಿದಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡುವಂತಾಗಿದೆ. ಬೇಂದ್ರೆ ನಗರ ಸಾರಿಗೆ ಮತ್ತು ಇತರ ಖಾಸಗಿ ವಾಹನಗಳು ಓಡಾಟ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಬೀದರ್‌
ಇನ್ನೂ ಬೀದರ್‌ ಜಿಲ್ಲೆಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿದೆ. ಕಲಬುರಗಿ, ಹುಮ್ನಾಬಾದ್, ಭಾಲ್ಕಿ, ಹೈದ್ರಾಬಾದ್, ಸೇರಿದಂತೆ ಹಲವು ಕಡೆ ಹೋಗಲು ಬಸ್‌ಗಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಅತ್ತ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಬಾಗಲಕೋಟೆ:
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಖಾಸಗಿ ಬಸ್‌ಗಳ ನಿಯೋಜನೆ ಸಹ ಮಾಡಿಕೊಳ್ಳದಿರುವ ಕಾರಣ, ಜನ ಕಂಗಾಲಾಗಿದ್ದಾರೆ. ಈ ನಡುವೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗದಿರಲು ಬಸ್‌ ನಿಲ್ದಾಣ ವ್ಯಾಪ್ತಿಯ 1 ಕಿಮೀ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಜಯಪುರ
ಜಿಲ್ಲೆಯಲ್ಲಿ ಬಸ್‌ ಬಂದ್‌ ಹಿನ್ನೆಲೆ ಜನ ಖಾಸಗಿ ವಾಹನಗಳ ಮೊರೆ ಹೋದ್ರೆ, ಕೆಲವರು ಸ್ವಂತ ವಾಹನಗಳ ಬಳಕೆಗೆ ಮುಂದಾಗಿದ್ದಾರೆ. ಪ್ರತಿನಿತ್ಯ ಜಿಲ್ಲೆಯಿಂದ ಸುಮಾರು 773 ಬಸ್‌ಗಳು ಸಂಚಾರ ಮಾಡುತ್ತವೆ. ಬೆಳಗ್ಗೆ ಟ್ರಿಪ್‌ಗೆ 131 ಬಸ್‌ ತೆರಳಬೇಕಿತ್ತು. ಆದ್ರೆ ಈವರೆಗೆ 43 ಬಸ್‌ಗಳಷ್ಟೇ ಸಂಚಾರಕ್ಕೆ ತೆರಳಿವೆ. ಅಲ್ಲದೇ 260 ಸಿಬ್ಬಂದಿ ಪೈಕಿ, 86 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾಡಳಿತದಿಂದ ಖಾಸಗಿ ಬಸ್‌ ವ್ಯವಸ್ಥೆ ಸಹ ಮಾಡದಿರುವ ಕಾರಣ ಜನ ನಿಲ್ದಾಣದಲ್ಲೇ ನಿಂತು ಕಂಗಾಲಾಗಿದ್ದಾರೆ.

ಬೆಳಗಾವಿ
ಸಾರಿಗೆ ನೌಕರರ ಮುಷ್ಕರದ ಬಿಸಿ ಗಡಿ ಜಿಲ್ಲೆ ಬೆಳಗಾವಿಗೂ ತಟ್ಟಿದೆ. ಬೆಳಗಾವಿ, ಚಿಕ್ಕೋಡಿ ಎರಡೂ ವಿಭಾಗದಲ್ಲಿ ಬಹುತೇಕ ಸಿಬ್ಬಂದಿ ಗೈರಾಗಿದ್ದಾರೆ. ಪ್ರತಿನಿತ್ಯ ಜಿಲ್ಲೆಯಲ್ಲಿ 700ಕ್ಕೂ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿತ್ತು. ಚಿಕ್ಕೋಡಿ ವಿಭಾಗದಲ್ಲಿ 668 ಬಸ್‌ಗಳ ಓಡಾಟ ಇರುತ್ತಿತ್ತು. ಎರಡೂ ವಿಭಾಗಗಳಲ್ಲಿ 4,300ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇಂದು ಬಂದ್‌ ಹಿನ್ನೆಲೆ ಸಿಬ್ಬಂದಿ ಗೈರಾಗಿದ್ದಾರೆ. ರಾತ್ರಿ ಹಾಗೂ ದೂರದ ಊರುಗಳಿಗೆ ತೆರಳಿದ್ದ ಬಸ್‌ಗಳಷ್ಟೇ ಡಿಪೋಗಳಿಗೆ ವಾಪಸ್‌ ಆಗುತ್ತಿದ್ದು, ನಿಲ್ದಾಣದಿಂದ ಯಾವುದೇ ಬಸ್‌ ಹೊರಡುತ್ತಿಲ್ಲ. ಅಲ್ಲದೇ ಬಂದ್‌ ಹಿನ್ನೆಲೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಬಳ್ಳಾರಿ
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಳ್ಳಾರಿ ವಿಭಾಗದ 6 ಘಟಕಗಳಲ್ಲೂ ಎಫೆಕ್ಟ್ ತಟ್ಟಿದೆ. ಬಳ್ಳಾರಿ ವ್ಯಾಪ್ತಿಯ 2,500 ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಇರುವ 450 ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಲ್ಲದೇ ಇಂದು ಪಿಯುಸಿ ಅಡ್ಮೀಶನ್‌ಗೆ ಹೊರಟಿದ್ದ ವಿದ್ಯಾರ್ಥಿನಿ ಪರದಾಡಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ಕಾಯುತ್ತಿದ್ದರೂ ಬಸ್‌ ಸಿಗದೇ ವಿದ್ಯಾರ್ಥಿನಿ ಪರದಾಡಿದ ದೃಶ್ಯವೂ ಕಂಡುಬಂದಿದೆ. ಈ ನಡುವೆ ಸುಮಾರು 100 ಖಾಸಗಿ ಬಸ್‌ಗಳು ಸಂಚಾರಕ್ಕೆ ಇಳಿದಿದ್ದು, ಪ್ರಯಾಣಿಕರು ಇದರ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ
ಇಲ್ಲಿಯೂ ಬಂದ್‌ ಬಿಸಿ ತಟ್ಟಿದ್ದು, ಜನ ಪರದಾಟ ನಡೆಸಿದ್ದಾರೆ. ಸಾಮಾನ್ಯ ದಿನಗಳಲ್ಲಿ 7 ಗಂಟೆ ವೇಳೆಗೆ 120 ಬಸ್‌ ಆಪರೇಟ್‌ ಆಗುತ್ತಿತ್ತು, ಇಂದು 60 ಬಸ್‌ಗಳು ಆಪರೇಟ್‌ ಆಗಿವೆ. ಶೇ.50 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ಡಿಪೋದಿಂದ ಬಸ್‌ ತೆಗೆಯಲು ಹಿಂದೇಟು ಹಾಕಿದ್ದಾರೆ. ಇನ್ನೂ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯ ಬಸವರಾಜು ಮಾತನಾಡಿ, ಕೆಲ ಸಿಬ್ಬಂದಿಗಳು ಕೆಲಸಕ್ಕೆ ಬರಲು ಆಸಕ್ತಿ ತೋರಿದ್ದರು ಆದ್ರೆ, ಭಯದಿಂದ ಮುಷ್ಕರಕ್ಕಿಳಿದಿದ್ದಾರೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕತೆ ನೀಡಿರೋ ಮುಷ್ಕರಕ್ಕೆ ಕಾಫಿನಾಡಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರು ವಿಭಾಗದ 6 ಡಿಪೋಗಳ 560 ಬಸ್‌ಗಳು ಸ್ಥಗಿತಗೊಂಡಿವೆ. ಚಾಲಕರು-ನಿರ್ವಾಹಕರು ಬಸ್ ಗಳನ್ನ ಡಿಪೋಗೆ ಹಾಕಿ ಬಸ್ ನಿಲ್ದಾಣ ಹಾಗೂ ಡಿಪೋ ಬಳಿ ಜಮಾಯಿಸಿದ್ದಾರೆ. ಬಸ್ ಬಂದ್ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕೂಡ ಸಂಪೂರ್ಣ ವಿರಳವಾಗಿದೆ. ಆದರೆ, ಹೈ ಕೋರ್ಟ್ ಕೂಡ ಒಂದು ದಿನ ಮುಂದೂಡುವಂತೆ ಸೂಚನೆ ನೀಡಿದ್ರು ಮುಷ್ಕರ ನಡೆಯುತ್ತಿರೋದ್ರಿಂದ ಚಾಲಕರು-ನಿರ್ವಾಹಕರು ಯಾವ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದ್ರು ಆಗಬಹುದು ಎಂದು ಯಾರೂ ಕೂಡ ಅಕ್ಕಪಕ್ಕದ ಹಳ್ಳಿಯ ಮನೆಗಳಿಗೂ ಹೋಗಿಲ್ಲ. ಆದರೆ, ಬಸ್ ಬಂದ್ ಹಿನ್ನೆಲೆ ಕಾಫಿನಾಡ ಬಸ್ ನಿಲ್ದಾಣ ಸಂಪೂರ್ಣ ಸ್ಥಬ್ಧವಾಗಿದೆ.

ಚಾಮರಾಜನಗರ
ಬೆಳಗ್ಗೆ ಏಳು ಗಂಟೆಯಾದರೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಒಂದು ಬಸ್ ಸಂಚಾರ ಕೂಡ ರಸ್ತೆಗಿಳಿದಿಲ್ಲ. ಸಾರಿಗೆ ನೌಕರರ ಮುಷ್ಕರದ ಬಂದ್ ಬಿಸಿ ತಟ್ಟಿದೆ. ಕಾಲೇಜಿಗೆ ಹೋಗುವ ವಿಧ್ಯಾರ್ಥಿಗಳು, ನೌಕರರು ಬಸ್ಸಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಖಾಸಗಿ ಬಸ್‌ಗಳ ದರ್ಬಾರ್ ಆರಂಭವಾಗಿದ್ದು, ಪ್ರಯಾಣಿಕರು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

ಚಿತ್ರದುರ್ಗ
ಬಂದ್ ಬಿಸಿ ಚಿತ್ರದುರ್ಗಕ್ಕೂ ತಟ್ಟಿದೆ. ಪ್ರತಿದಿನ ಜನಜಂಗುಳಿಯಿಂದ ಪ್ರಯಾಣಿಕರೇ ಗಿಜುಗುಡ್ತಿದ್ದ ಚಿತ್ರದುರ್ಗದ ಸಾರಿಗೆ ಬಸ್ ನಿಲ್ದಾಣ ಇಂದು ಸಂಪೂರ್ಣ ಖಾಲಿ ಖಾಲಿಯಾಗಿದೆ. ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆ ಖಾಸಗಿ ಬಸ್ ಹಾಗೂ ಗೂಡ್ಸ್ ವಾಹಗಳ ಮೊರೆ ಹೋಗುತ್ತಿದ್ದಾರೆ ಜನ.

ದಾವಣಗೆರೆ
ಸಾರಿಗೆ ನೌಕರರ ಮಷ್ಕರದಿಂದ ದಾವಣಗೆರೆ ಜಿಲ್ಲೆಯಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಆದ್ರೆ ಮುಷ್ಕರದ ಎಫೆಕ್ಟ್ ಪ್ರಯಾಣಿಕರಿಗೆ ತಟ್ಟಿಲ್ಲ. ಪ್ರಯಾಣಿಕರೇ ಹಿಂದೇಟು ಹಾಕಿರುವುದರಿಂದ ಜನದಟ್ಟಣೆ ಕಡಿಮೆಯಿದೆ. ಕೆಲವರು ಖಾಸಗಿ ಬಸ್‌ಗಳ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

ಗದಗ
ಇನ್ನೂ ಗದಗ ಜಿಲ್ಲೆಯಲ್ಲೂ ಸಾರಿಗೆ ಮುಷ್ಕರದಿಂದ ಜನ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ 8 ಡಿಪೋಗಳಿಂದ ನಿತ್ಯ 561 ಬಸ್‌ಗಳು ಸಂಚರಿಸುತ್ತಿದ್ದವು. 70 ರಿಂದ 80 ಲಕ್ಷ ಆದಾಯ ಬರುತ್ತಿತ್ತು. ಆದ್ರೆ ಇಂದು ಒಂದೇ ಒಂದು ಬಸ್‌ ರಸ್ತೆಗಿಳಿದಿಲ್ಲ. ರಾತ್ರಿ ತೆರಳಿದ್ದ ಬಸ್‌ಗಳಷ್ಟೇ ಡಿಪೋಗಳಿಗೆ ವಾಪಸ್‌ ಆಗುತ್ತಿವೆ. ಇತ್ತ ಕೆಲಸಕ್ಕೆ ತೆರಳಬೇಕಿದ್ದ ಜನ ನಿಲ್ದಾಣದಲ್ಲೇ ಕಾದುಕುಳಿತಿದ್ದಾರೆ.

ಕಲಬುರಗಿ
ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಕಲಬುರಗಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಬಳಸಿಕೊಂಡ ಸಾರಿಗೆ ಇಲಾಖೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೊದಲ ಹಂತದಲ್ಲಿ ವಿಜಯಪುರ, ಬೀದರ್ ಜಿಲ್ಲೆಗಳಿಗೆ ಖಾಸಗಿ ಬಸ್ ಗಳನ್ನು ಬಿಡಲಾಗಿದೆ. ಸಾರಿಗೆ ಬಸ್‌ನ ದರದಲ್ಲಿಯೇ ಖಾಸಗಿ ಬಸ್‌ಗಳು ಸಹ ಟಿಕೆಟ್ ನೀಡಲಾಗುತ್ತಿದೆ. ಖುದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಎದುರು ನಿಂತು ಪ್ರಯಾಣಿಕರಿಗೆ ಟಿಕೆಟ್ ಕೊಡಿಸುವ ಕೆಲಸ ಮಾಡಿದ್ದಾರೆ.

ಹುಬ್ಬಳ್ಳಿ
ಹುಬ್ಬಳ್ಳಿಯಲ್ಲೂ ಬಂದ್‌ ಬಿಸಿ ತಟ್ಟಿದ್ದು, ಜನ ಬಸ್ಸಿಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಈ ನಡುವೆ ಸಾರ್ವಜನಿಕರೇ ಫ್ರೀ ಯೋಜನೆಗಳನ್ನ ಕಡಿತಗೊಳಿಸುವಂತೆ ಒತ್ತಡ ಹೇರಿದ್ದಾರೆ. ಈ ನಡುವೆ ಎನ್‌ಡಬ್ಯುಕೆಎಸ್‌ಆರ್‌ಟಿಸಿ ಎಂಡಿ ಪ್ರಿಯಾಂಗ್ ಸಾರ್ವಜನಿಕರಂತೆ ಖಾಸಗಿ ಬಸ್‌ನಲ್ಲೇ ಪ್ರಯಾಣ ಮಾಡಿದ್ದಾರೆ.

ಹಾವೇರಿ
ಹಾವೇರಿಯಲ್ಲೂ ಸಹ ಬಂದ್ ಬಿಸಿ ತಟ್ಟಿದ್ದು, ರಾತ್ರಿ ಹೋಗಿರುವ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿವೆ. ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ದಾವಣಗೆರೆ ಕಡೆ ಹೋಗುವ ಜನರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. 9 ಗಂಟೆಯ ನಂತರ ಬಸ್ ಬಂದ್ ಪರಸ್ಥಿತಿ ತಿಳಿಯಲಿದೆ. ಕೆಲವು ನೌಕರರು ಡ್ಯೂಟಿ ಬರೋದು ಬೇಡ್ವಾ ಅನ್ನೊ ಗೊಂದಲ ಇದ್ದಾರೆ.

ಕೋಲಾರ
ಸಾರಿಗೆ ಮುಷ್ಕರ ಹಿನ್ನೆಲೆ ಗಣಿ ನಾಡು ಕೋಲಾರದಲ್ಲೂ ಜನರು ಪರದಾಡುವಂತಾಗಿದೆ, ಕೆಲವರು ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕೋಲಾರ ಗಲ್ ಪೇಟೆ ಪೊಲೀಸರು ನಿಲ್ದಾಣದಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಕೊಪ್ಪಳ
ಜಿಲ್ಲೆಯಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಅಂತ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ತಿಳಿಸಿದ್ದಾರೆ. 7 ಗಂಟೆಗೆ 41 ಬಸ್‌ ಸಂಚಾರ ಮಾಡಬೇಕಿತ್ತು. ಆದ್ರೆ ಒಂದೇ ಒಂದು ಬಸ್‌ ಕೂಡ ರಸ್ತೆಗಿಳಿದಿಲ್ಲ. ಕೊಪ್ಪಳದಲ್ಲಿ ಪ್ರತಿದಿನ 474 ಬಸ್‌ಗಳು ಸಂಚರಿಸಲಿದ್ದು, 2,600 ಟ್ರಿಪ್‌ ಆಪರೇಟ್‌ ಆಗುತ್ತವೆ. 700 ಟ್ರಿಪ್‌ ಜಿಲ್ಲೆಯ ಹೊರಗೆ ಆಪರೇಟ್‌ ಮಾಡುತ್ತೇವೆ. ಇಂದು ಜಿಲ್ಲೆಯ 5 ಘಟಕಗಳಲ್ಲಿರುವ 1,900 ಸಿಬ್ಬಂದಿಗೂ ಕರ್ತವ್ಯಕ್ಕೆ ಗೈರಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಆದ್ರೆ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕಾರ್ಖಾನೆ, ಶಾಲೆ, ಮ್ಯಾಕ್ಸಿಕ್ಯಾಬ್ ಸೇರಿ 640 ಖಾಸಗಿ ವಾಹನಗಳಿವೆ. ಅವುಗಳನ್ನ ಬಳಕೆ ಮಾಡಲು ವ್ಯವಸ್ಥೆ ಮಾಡಿರುವುದಾಗಿ ರಾಜೇಂದ್ರ ಜಾಧವ್‌ ತಿಳಿಸಿದ್ದಾರೆ.

ಕಾರವಾರ
ರಾಜ್ಯಾದ್ಯಂತ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ನೌಕರರ ಗೊಂದಲದಲ್ಲಿ ಬೆರಳೆಣಿಕೆಯ ಬಸ್ ಗಳು ಮಾತ್ರ ಸಂಚಾರ ಮಾಡಿದ್ದು, ಬಸ್ ಗಾಗಿ ಕಾದು ನಿಂತ ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡುತಿದ್ದಾರೆ.

ಮಂಡ್ಯ
ಮುಷ್ಕರದ ಹಿನ್ನೆಲೆ ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಘಟಕದ 103 ಬಸ್‌ ಸೇರಿ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಜನ ಪರದಾಡುವಂತಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಯಚೂರು
ರಾಯಚೂರಿನಲ್ಲಿ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ ತಟ್ಟಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ನೌಕರರ ಮುಷ್ಕರ ಆರಂಭವಾಗಿದೆ. ಬಸ್ ನಿಲ್ದಾಣದಲ್ಲಿ ಹಾಲ್ಟಿಂಗ್ ಇರುವ ಬಸ್‌ಗಳು ಮಾತ್ರ ಓಡಾಟ ನಡೆಸಿದ್ದು ಬೆಳ್ಳಿಗ್ಗೆಯಿಂದ 15 ಬಸ್‌ಗಳು ಮಾತ್ರ ಹೋಗಿದ್ದು, ಬರುವ ಬಸ್‌ಗಳನ್ನ ಡಿಪೋಕ್ಕೆ ಕಳುಹಿಸಲಾಗುತ್ತಿದೆ. ಡಿಪೋದಿಂದ ಯಾವುದೇ ಬಸ್‌ಗಳು ಹೊರಬರುತ್ತಿಲ್ಲ. ಹೀಗಾಗಿ ದೂರದ ಊರುಗಳಿಂದ ಬಂದ ಪ್ರಯಾಣಿಕರು ಗ್ರಾಮೀಣ ಭಾಗಗಳಿಗೆ ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ರಾಯಚೂರು ವಿಭಾಗದ 600 ಬಸ್‌ಗಳ ಓಡಾಟ ಬಂದ್ ಆಗಿದೆ. ರಾಯಚೂರಿನಿಂದ ವಿವಿಧೆಡೆ ಹೊರಡುವ 250 ಬಸ್ ಗಳ ಓಡಾಟ ಸ್ಥಗಿತವಾಗಿದೆ. 10 ಗಂಟೆಯ ಬಳಿಕ ಎಲ್ಲಾ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದ್ದು ಸಾರಿಗೆ ನೌಕರರ ಮುಷ್ಕರ ಜೋರಾಗಲಿದೆ.

ರಾಮನಗರ
ರಾಮನಗರದಲ್ಲೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದ್ದು, ಸಾರ್ವಜನಿಕರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗಿದೆ. ಬಂದ್‌ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಅಧಿಕೃತವಾಗಿಯೇ ಓಡಾಟ ನಡೆಸುತ್ತಿವೆ. ಬೆಂಗಳೂರು, ಮಾಗಡಿ, ಕನಕಪುರ ಭಾಗಕ್ಕೆ ಖಾಸಗಿ ಬಸ್ ಗಳ ಸಂಚಾರ ನಡೆಸುತ್ತಿವೆ. ಹೀಗಾಗಿ ಇಲ್ಲಿನ ಜನಕ್ಕೆ ಹೆಚ್ಚಿನ ಬಂದ್‌ ಬಿಸಿ ತಟ್ಟಿಲ್ಲ.

ಶಿವಮೊಗ್ಗ
ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಘಟಕದಿಂದ ಬೇರೆ ಜಿಲ್ಲೆಗಳಿಗೆ ಕೆಲ ಬಸ್‌ಗಳು ಸಂಚಾರ ನಡೆಸುತ್ತಿದ್ದರೆ, ಇನ್ನೂ ಕೆಲ ನೌಕರರು ಮುಷ್ಕರಕ್ಕೆ ಧುಮುಕಿದ್ದಾರೆ. ಶಿವಮೊಗ್ಗ ಘಟಕದಲ್ಲಿ 375 ಬಸ್‌ಗಳಿವೆ. ಈ ಪೈಕಿ ಶಿವಮೊಗ್ಗ ಡಿಪೋ ದಿಂದ ಬೆಂಗಳೂರಿಗೆ 45 ಬಸ್‌ಗಳು ತೆರಳುತ್ತವೆ. ಪ್ರತಿದಿನ 1,190 ಬಸ್‌ಗಳು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಪ್ರತಿದಿನ 35,000 ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆದರಿಂದು ಸಂಚಾರ ಸ್ಥಬ್ಧಗೊಂಡಿದೆ.

ಯಾದಗಿರಿ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕತೆ ನೀಡಿರೋ ಮುಷ್ಕರಕ್ಕೆ ಯಾದಗಿರಿಯಲ್ಲೂ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಉತ್ತರಪ್ರದೇಶ, ತೆಲಂಗಾಣ ಹಾಗೂ ವಿವಿಧ ಭಾಗದಿಂದ ಆಗಮಿಸಿದ ಪ್ರಯಾಣಿಕರು ಊರಿಗೆ ತೆರಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅತ್ತ ಸಾರಿಗೆ ನೌಕರರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

Share This Article