ನವದೆಹಲಿ: ಪಶ್ಚಿಮ ಬಂಗಾಳದಲ್ಲಿ (West Bengal) ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಲ್ಲಿಸಿದ್ದ ಒಟ್ಟು 60 ಲಕ್ಷ ಆಕ್ಷೇಪಣೆಗಳಲ್ಲಿ 47 ಲಕ್ಷ ಆಕ್ಷೇಪಣೆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕೋಲ್ಕತ್ತಾ ಹೈಕೋರ್ಟ್ (Calcutta High Court) ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದರು.
ಪ್ರತಿದಿನ ಸುಮಾರು 1.74ಲಕ್ಷದಿಂದ 2 ಲಕ್ಷ ದೂರುಗಳ ಮೇಲೆ ಕ್ರಮವಹಿಸಲಾಗುತ್ತಿದೆ. ಏಪ್ರಿಲ್ 7ರೊಳಗೆ ಎಲ್ಲಾ ಆಕ್ಷೇಪಣೆಗಳ ನಿರ್ಣಯವನ್ನು ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಭರವಸೆ ನೀಡಿದರು. ಇದನ್ನೂ ಓದಿ: ಮನೆಗಳಲ್ಲಿ ಪ್ರಾರ್ಥನಾ ಸಭೆ ನಡೆಸಲು ಪೂರ್ವಾನುಮತಿ ಬೇಡ – ಛತ್ತೀಸ್‌ಗಢ ಹೈಕೋರ್ಟ್
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಮಮತಾ ಬ್ಯಾನರ್ಜಿ ಪರ ವಕೀಲರು ಹಾಜರಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದರ ಪ್ರಮಾಣ ಸುಮಾರು 45% ತಲುಪಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಟ್ರಿಬ್ಯುನಲ್‌ಗಳು ತಮ್ಮ ಕೆಲಸವನ್ನು ಮುಕ್ತವಾಗಿ ಮುಂದುವರಿಸಲಿ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಅಥವಾ ತೆಗೆಯುವುದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಟ್ರಿಬ್ಯುನಲ್‌ಗಳು ನಿರ್ಣಯಿಸಲಿ ಎಂದು ಸೂಚಿಸಿದೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್| 3 ವರ್ಷ ಜೈಲು, 4.5 ಕೋಟಿ ದಂಡ – ದಂಡ ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ

