ಸಂತಕವಿ ತ್ಯಾಗರಾಜರು ʻನಾದಲೋಲುಡೈ ಬ್ರಹ್ಮಾನಂದಮೊಂದವೇ ಓ ಮನಸಾ!ʼ ಎಂದಿದ್ದಾರೆ. ಅಂದ್ರೆ ʻಓ ಮನವೇ! ನಾದಲೋಲನಾಗಿ ಬ್ರಹ್ಮಾನಂದವನ್ನು ಅನುಭವಿಸುʼ ಎಂದರ್ಥ. ಎಂತಹ ಕಲ್ಲು ಹೃದಯದ ಮನುಷ್ಯನಾದ್ರೂ ಸಂಗೀತಕ್ಕೆ ಒಮ್ಮೆಯಾದ್ರು ತಲೆದೂಗದವರಿಲ್ಲ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕಿಯೇ ಇರುತ್ತದೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್ (PUBLIC Music) ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.
ಭಾಷೆಗೂ ಮೀರಿದ ಭಾವ ಸಂಗೀತ. ಸಂತಸದ ಸಂಭ್ರಮಕ್ಕೆ, ನೋವಿನ ನೆನಪುಗಳಿಗೆ ಸಂಗೀತ ಎಂದಿಗೂ ಸಂಜೀವಿನಿ. ಇಂಥ ಸಂಗೀತವನ್ನು ಸತತವಾಗಿ 11 ವರ್ಷಗಳಿಂದ ಕನ್ನಡಿಗರಿಗೆ ತಲುಪಿಸುತ್ತಿರುವ ʻಪಬ್ಲಿಕ್ ಮ್ಯೂಸಿಕ್ʼಗೆ ಇದೀಗ 11ರ ಸಂಭ್ರಮ.
ಸೆಪ್ಟೆಂಬರ್ 28 ರಂದು ʻಪಬ್ಲಿಕ್ ಟಿ.ವಿʼಯ ಕೂಸು ಪಬ್ಲಿಕ್ ಮ್ಯೂಸಿಕ್‌ಗೆ ಸಡಗರ.. ಸಂಭ್ರಮ. ಪ್ರತೀ ವರ್ಷವೂ ಯೂನಿಕ್ ಆಗಿರೋ ಕಾರ್ಯಕ್ರಮಗಳ ಮೂಲಕ ವಾರ್ಷಿಕೋತ್ಸವ ಆಚರಣೆ ಮಾಡ್ತಿರೋ ಪಬ್ಲಿಕ್ ಮ್ಯೂಸಿಕ್ ಈ ಬಾರಿ 11ನೇ ವರ್ಷ ಮುಗಿಸಿ ಹನ್ನೆರ ವಸಂತಕ್ಕೆ ಕಾಲಿಡುತ್ತಿದೆ. ಈ ಶುಭ ಘಳಿಗೆಯಲ್ಲಿ `ಸ್ವರ ಮನ್ವಂತರ’ ಅನ್ನೋ ಹೆಸರಿನ ಮೂಲಕ ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್ ಪಬ್ಲಿಕ್ ಮ್ಯೂಸಿಕ್ 11 ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತಿದೆ.
ಬೆಳಗ್ಗೆ 10-30ಕ್ಕೆ ಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಜೊತೆ ಆಡಿಯೋ ಕಂಪನಿ ಮುಖ್ಯಸ್ಥರಾದ ಲಹರಿ ವೇಲು, ಭರತ್ ಜೈನ್, ಅಶ್ವಿನಿ ರಾಮ್ ಪ್ರಸಾದ್ ಹಾಗೂ ಕನ್ನಡದ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಜಯ್ ರಾಘವೇಂದ್ರ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸ್ತಾರೆ. ತದನಂತರ ಒಂದಷ್ಟು ಹಾಡು-ಹರಟೆಯೂ ಕೂಡ ಇರಲಿದೆ.
ಇನ್ನು ಯಾವತ್ತು ನಮ್ಮ ಕೈಬಿಡದ ʻಪಬ್ಲಿಕ್ ಮ್ಯೂಸಿಕ್ʼ ವೀಕ್ಷಕರಿಗೋಸ್ಕರ ವಾರ್ಷಿಕೋತ್ಸವದ ಪ್ರಯುಕ್ತ ದಿನಪೂರ್ತಿ ಮನರಂಜನೆ ನೀಡೋಕೆ ಕಲರ್‌ಫುಲ್ ಲೈವ್ ಶೋಗಳು, ಸ್ಪೆಷಲ್ ಕಾರ್ಯಕ್ರಮಗಳು ರೆಡಿ ಇವೆ.
ನಿಮ್ಮ ಸಹಕಾರಿಂದ ಈ 11 ಮೆಟ್ಟಿಲುಗಳನ್ನು ಪಬ್ಲಿಕ್ ಮ್ಯೂಸಿಕ್ ಸಲೀಸಾಗಿ ದಾಟಿದೆ. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ಮಗುವಂತೆ ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎಂಬ ಭರವಸೆಯನ್ನೂ ನಮಗೆ ಕೊಟ್ಟಿದ್ದೀರಿ.
ಹಾಡೋಣ.. ಕುಣಿಯೋಣ.. ಸ್ವರ ಮನ್ವಂತರಕ್ಕೆ ಸಾಕ್ಷಿಯಾಗೋಣ!