– ಪವನ್ ಕಲ್ಯಾಣ್‌ಗೆ ಧನ್ಯವಾದ ಅರ್ಪಿಸಿದ ಹೊಂಬಾಳೆ ಫಿಲಂಸ್
ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ್ದಕ್ಕೆ ಪವನ್ ಕಲ್ಯಾಣ್‌ಗೆ (Pawan Kalyan) ಹೊಂಬಾಳೆ ಫಿಲಂಸ್ (Hombale Film’s) ಧನ್ಯವಾದ ಅರ್ಪಿಸಿದೆ.
ಅಖಂಡ ಆಂಧ್ರದಾದ್ಯಂತ ಕಾಂತಾರ ಚಿತ್ರಕ್ಕೆ ಬಾಯ್ಕಾಟ್ ಹೇರಿ ಅಭಿಯಾನ ಶುರುವಾಗಿತ್ತು. ಹೈದ್ರಾಬಾದ್‌ನಲ್ಲಿ ಪ್ರೀ-ರಿಲೀಸ್ ಇವೆಂಟ್ ವೇಳೆ ರಿಷಬ್ (Rishab Shetty) ಕನ್ನಡದಲ್ಲಿ ಮಾತನಾಡಿದ್ರು ಅನ್ನೋದು ಒಂದು ಕಾರಣವಾಗಿದ್ರೆ, ಪವನ್ ಕಲ್ಯಾಣ ಓಜಿ ಸಿನಿಮಾ ರಿಲೀಸ್ ಆದ ವೇಳೆ ಥಿಯೇಟರ್‌ನಲ್ಲಿ ಡಿಜೆ ಬಳಸಿ ಗಲಾಟೆ ಮಾಡಿರುವುದನ್ನ ಕನ್ನಡಪರ ಸಂಘಟನೆಗಳು ತಡೆದು ವಿರೋಧಿಸಿದ್ದವು ಅನ್ನೋದು ಇನ್ನೊಂದು ಕಾರಣ. ಹೀಗಾಗಿ ಆಂಧ್ರದಲ್ಲಿ ಒಂದು ಗುಂಪು ಕಾಂತಾರ ಚಿತ್ರಕ್ಕೆ ಬಾಯ್ಕಾಟ್ ಅಭಿಯಾನ ಶುರುಮಾಡಿತ್ತು. ಇದನ್ನೂ ಓದಿ: ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದು ಬೇಡ – ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ
ಇದೀಗ ಬಿಗುವಿನ ಪರಿಸ್ಥಿತಿಯನ್ನು ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ತಿಳಿಗೊಳಿಸಿದ್ದಾರೆ. ಆಂಧ್ರದಲ್ಲಿ ಕಾಂತಾರ ಚಿತ್ರ ಸುಲಭವಾಗಿ ರಿಲೀಸ್ ಆಗುವಂತೆ ದಾರಿ ಮಾಡಿಕೊಟ್ಟಿದ್ದಾರೆ. ಹೀಗಾಗಿ ಕಾಂತಾರ ಚಿತ್ರತಂಡ ಪವನ್ ಕಲ್ಯಾಣ್‌ಗೆ ಅಧಿಕೃತವಾಗಿ ಧನ್ಯವಾದ ಅರ್ಪಿಸಿದೆ.
ಕಾಂತಾರ ಚಿತ್ರಕ್ಕೆ ತಮ್ಮ ರಾಜ್ಯದಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನ ತಡೆದ ಪವನ್ ಕಲ್ಯಾಣ್ ರಾಜ್ಯದ ಜನತೆಗೆ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎದುರಾಗುವ ಪರಿಸ್ಥಿತಿ ಮುಂದಿಟ್ಟುಕೊಂಡು ಅವರ ಚಿತ್ರಗಳಲ್ಲಿ ನಾವು ಇಲ್ಲಿ ತೊಂದರೆ ಕೊಡುವುದು ಸರಿಯಿಲ್ಲ. ನಾವು ರಾಷ್ಟ್ರೀಯ ಭಾವನೆಯಿಂದ ಹಾಗೂ ಹೃದಯದಿಂದ ನೋಡಬೇಕು. ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಿಷಬ್ ಶೆಟ್ಟಿವರೆಗೂ ತೆಲುಗು ಜನರು ಬೆಂಬಲ ಕೊಟ್ಟಿದ್ದಾರೆ. ನಾವು ಸಹೋದರತ್ವದಿಂದ ಮುಂದುವರೆಯಬೇಕು ಎಂದು ಕರೆ ಕೊಟ್ಟಿದ್ದಾರೆ.
ಜೊತೆಗೆ ಎರಡೂ ರಾಜ್ಯಗಳ ಚಲನಚಿತ್ರ ಮಂಡಳಿಗಳು ಪರಸ್ಪರ ಎದುರಾಗುತ್ತಿರುವ ಅಡೆತಡೆಗಳ ಚರ್ಚಿಸಬೇಕು. ಈ ವಿಷಯವನ್ನು ನಾನು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ. ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ ಇಟ್ಟುಕೊಂಡು ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ತೊಂದರೆ ಕೊಡಬೇಡಿ ಎಂದು ತಮ್ಮ ನಾಡಿನ ಜನತೆಗೆ ಡಿಸಿಎಂ ಸಂದೇಶ ರವಾನಿಸಿದ್ದಾರೆ. ಹೀಗೆ ಎರಡೂ ರಾಜ್ಯಗಳ ಪರಸ್ಪರ ಸೌಹಾರ್ದತೆ ಕಾಪಾಡಿಕೊಳ್ಳಲು ಸೇತುವೆಯಾಗಿದ್ದಾರೆ.