ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಅಗಲಿದ ಫ್ಯಾಂಟಮ್‌ – ಸೇನೆಯಿಂದ ಕಣ್ಣೀರ ವಿದಾಯ

Public TV
2 Min Read

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯ ಹೆಮ್ಮೆಯ ಶ್ವಾನ (Army Dog) ಫ್ಯಾಂಟಮ್ (Phantom) ಪ್ರಾಣ ಕಳೆದುಕೊಂಡಿದೆ.

ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಫ್ಯಾಂಟಮ್‌ (4) ಮೃತಪಟ್ಟಿದೆ. ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನವಾಗಿದ್ದು, 2020ರ ಮೇ 25 ರಂದು ಜನಿಸಿತ್ತು. ಅದು K9 ಘಟಕದ ಆಕ್ರಮಣಕಾರಿ ಶ್ವಾನವಾಗಿತ್ತು. ಇದು ಉಗ್ರರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ತರಬೇತಿ ಪಡೆದ ಶ್ವಾನ ದಳದ ವಿಶೇಷ ಘಟಕವಾಗಿದೆ. ಫ್ಯಾಂಟಮ್‌ನ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಸೇನೆ ಹೇಳಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸೇನೆ, ನಮ್ಮ ಶ್ವಾನ ಫ್ಯಾಂಟಮ್‌ನ ತ್ಯಾಗಕ್ಕೆ ನಮನ ಸಲ್ಲಿಸುತ್ತೇವೆ. ನಮ್ಮ ಸೈನಿಕರು ಸಿಕ್ಕಿಬಿದ್ದ ಭಯೋತ್ಪಾದಕರ ಬಳಿಗೆ ತೆರಳುತ್ತಿದ್ದಾಗ ಫ್ಯಾಂಟಮ್ ಶತ್ರುಗಳ ದಾಳಿಗೆ ಒಳಗಾಯಿತು. ಅವನ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಅಸನ್, ಸುಂದರಬಂಡಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ಸೇನಾ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ದಾಳಿ ನಡೆಸಿದ್ದ ಉಗ್ರರ ಪತ್ತೆಗೆ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನ ಜೀವ ಉಳಿಸಲು ಹೋಗಿ ಆರು ವರ್ಷದ ಸೇನೆಯ ಶ್ವಾನ ಕೆಂಟ್ ಸಾವನ್ನಪ್ಪಿತ್ತು. ಅದಕ್ಕೂ ಮೊದಲು ಕೆಂಟ್‌ 9 ಕಾರ್ಯಾಚರಣೆಗಳ ಭಾಗವಾಗಿತ್ತು.

Share This Article