ಹಣಕ್ಕಾಗಿ ಹೆಣ್ಣುಮಗು ಮಾರಾಟ ಮಾಡಿದ ತಾಯಿ – ಐವರ ಬಂಧನ

Public TV
2 Min Read

ಕಾರವಾರ: ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಅನ್ಯ ಕೋಮಿನ ದಂಪತಿಗೆ ಮಾರಾಟ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

6 ದಿನಗಳ ಹಿಂದೆ ಜನಿಸಿದ ನವಜಾತ ಶಿಶುವಿನ ಲಾಲನೆ ಪಾಲನೆ ಮಾಡಲು ನನ್ನ ಕೈಯಿಂದ ಸಾಧ್ಯವಿಲ್ಲ ಎಂದು ತಾಯಿಯೇ 25 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆ ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೌಳಿವಾಡಾ ಗ್ರಾಮದಲ್ಲಿ ನಡೆದಿದೆ.

ಘಟನೆ ಏನು?
ಗೌಳಿವಾಡಾ ಗ್ರಾಮದ ಸಾವಿತ್ರಿ ದೊಂಡು ಡೊಯಿಪಡೆ(26) ಗಂಡನನ್ನು ತೊರೆದು ತಾಯಿಯ ಮನೆಯಲ್ಲಿ ವಾಸವಾಗಿದ್ದಳು. ಬಳಿಕ ಅನೈತಿಕ ಸಂಬಂಧದಿಂದ ಮಹಿಳೆ ಗರ್ಭಿಣಿಯಾಗಿದ್ದು ಏಪ್ರಿಲ್ 20ರಂದು ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ.

ಏಪ್ರಿಲ್ 22 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಗ್ರಾಮಕ್ಕೆ ಮರಳುತ್ತಿರುವ ಸಂದರ್ಭದಲ್ಲಿ 25 ಸಾವಿರ ರೂ.ಗೆ ಪಕ್ಕದ ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ಎಂಬ ದಂಪತಿಗೆ ಮಾರಾಟ ಮಾಡಿ ಸ್ವಗ್ರಾಮಕ್ಕೆ ತೆರಳಿದ್ದಾಳೆ. ಮಗುವಿನ ಕುರಿತು ಮೇಲ್ವಿಚಾರಣೆ ಮಾಡಲು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ನವಜಾತ ಶಿಶುವಿನ ಮನೆಗೆ ತೆರಳಿದಾಗ ವಿಷಯ ಹೊರಬಿದ್ದಿದೆ. ಇದನ್ನೂ ಓದಿ: ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು

ವಿಷಯ ತಿಳಿದ ತಕ್ಷಣ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಘಟನಾ ಸ್ಥಳಕ್ಕೆ ಸಿಡಿಪಿಒ ಡಾ. ಲಕ್ಷ್ಮೀದೇವಿ, ಪಿಎಸ್‌ಐ ಶಿವಾನಂದ್ ನಾವದಗಿ, ಪಿಡಿಒ ಮಹಾಂತೇಶ್ ಹುರಕಡ್ಡಿ, ವಲಯ ಮೇಲ್ವಿಚಾರಕಿ ರಾಜೇಶ್ವರಿ ಕಟ್ಟಿಮನಿ, ಮಹಿಳಾ ಪೇದೆ ರಮ್ಯಾ ವಿಚಾರಣೆ ನಡೆಸಿದಾಗ ಮಗು ಮಾರಾಟವಾದ ವಿಷಯ ತಿಳಿದುಬಂದಿದೆ. ಇದನ್ನೂ ಓದಿ: ರಾಜಕಾರಣಿಗಳಿಗೆ ದಿವ್ಯಾ ಜಾಲ – ಘಟಾನುಘಟಿಗಳೊಂದಿಗಿನ ಫೋಟೋಸ್ ವೈರಲ್

POLICE JEEP

ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿ, ಯಲ್ಲಾಪುರಕ್ಕೆ ತೆರಳಿ ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಮಗುವನ್ನು ಅಕ್ರಮ ಹಾಗೂ ಅನೈತಿಕವಾಗಿ ಸಾಗಾಣಿಕೆ ಮಾಡಲು ಸಹಕರಿಸಿದ ಮಹಿಳೆಯ ಅಣ್ಣ ಭಯ್ಯಾಜಾನು ಪಟಕಾರೆ, ಅಗಸಲಕಟ್ಟಾ ಗ್ರಾಮದ ಆಶಾ ಕಾರ್ಯಕರ್ತೆ ರೋಜಿ ಲೂಯಿಸ್ ದಬಾಲಿ, ಮಮ್ತಾಜ್ ಸರ್ದಾರ್ ಹಳಬ, ಶಿಶುವನ್ನು ಪಡೆದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ದಂಪತಿ ವಿರುದ್ಧಸೂಕ್ತ ಕ್ರಮ ಕೈಗೊಳ್ಳುವಂತೆ ಡಾ. ಲಕ್ಷ್ಮೀದೇವಿ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *