Ballari Firing Case | ತನಿಖೆ ನಡೆಯುತ್ತಿದೆ, ಯಾರನ್ನೂ ಬಿಡಲ್ಲ – ಸಚಿವ ಜಮೀರ್ ವಾರ್ನಿಂಗ್‌

2 Min Read

– ಸಣ್ಣ ವಿಚಾರಕ್ಕೆ ಆಗಿರುವ ಗಲಾಟೆ, ಜನಾರ್ದನ ರೆಡ್ಡಿನ ಟಾರ್ಗೆಟ್ ಮಾಡಿಲ್ಲ; ಸ್ಪಷ್ಟನೆ

ಬಳ್ಳಾರಿ: ಬ್ಯಾನರ್‌ (Banner) ಕಟ್ಟುವ ವಿಚಾರದಲ್ಲಿ ಘರ್ಷಣೆ ಆಗಿದೆ, ಇದು ಆಗಬಾರದಿತ್ತು. ನಾನು ಈಗಾಗಲೇ ಬಳ್ಳಾರಿ ಡಿಸಿ, ಎಸ್ಪಿ ಜೊತೆಗೆ ಮಾತನಾಡಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಈಗ ಕಂಟ್ರೋಲ್‌ಗೆ ಬಂದೆದೆ. ಮುಖ್ಯಮಂತ್ರಿಗಳಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ಸಚಿವ ಜಮೀರ್ ಅಹಮದ್ (Zameer Ahmed Khan) ಹೇಳಿದ್ದಾರೆ.

ಬಳ್ಳಾರಿ ಫೈರಿಂಗ್‌ ಪ್ರಕರಣಕ್ಕೆ (Ballari Firing Case) ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾನೆ‌. ಫೈರಿಂಗ್ ಹೇಗೆ ಆಯ್ತು? ಅಂತಾ ಪೊಲೀಸರು ತನಿಖೆ ಮಾಡ್ತಾ ಇದಾರೆ. ಸಿಎಂ ಸಹ ಈ ಘಟನೆಗೆ ಬೇಸರ ವ್ಯಕ್ತಪಡಿಸಿ ಸಿಟ್ಟು ಮಾಡಿಕೊಂಡಿದ್ದಾರೆ. ಯಾರೇ ಇದ್ರೂ ಕ್ರಮ ಕೈಗೊಳ್ತೀವಿ. ನಾಗೇಂದ್ರ ಬಳ್ಳಾರಿಗೆ (Ballari) ಹೋಗ್ತಾ ಇದ್ದಾರೆ. ನಾನು ಸಹ ಇಂದು ಸಂಪುಟ ಸಭೆ ಬಳಿಕ, ಸಿಎಂ ಜೊತೆ ಕೋಗಿಲು ಲೇಔಟ್ ಸಭೆ ಮುಗಿಸಿ ಬಳ್ಳಾರಿಗೆ ಹೋಗ್ತೀನಿ ಅಂತಾ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ಸೂಚನೆ ಕೊಟ್ಟರೆ ಕಾಲೇಜು ಹೆಣ್ಣುಮಕ್ಕಳಿಗೆ ಋತುಚಕ್ರ ರಜೆ: ಡಾ. ಎಂ.ಸಿ.ಸುಧಾಕರ್

ಯಾರನ್ನೂ ಟಾರ್ಗೆಟ್‌ ಮಾಡಿಲ್ಲ
ಜನಾರ್ದನ ರೆಡ್ಡಿ (Janardhana Reddy) ಟಾರ್ಗೆಟ್ ಎಂಬ ಬಿಜೆಪಿ (BJP) ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್, ಯಾರನ್ನೋ ಟಾರ್ಗೆಟ್ ಮಾಡಿದ್ದಾರೆ ಅನ್ನೋದು ಸುಳ್ಳು. ಇದು ಸಣ್ಣ ವಿಚಾರಕ್ಕೆ ಆಗಿರುವ ಗಲಾಟೆ. ಇದು ಸರಿ ಮಾಡಬಹುದಿತ್ತು, ಬ್ಯಾನರ್ ಕಟ್ಟಿರೋದು ನಿಜ, ಅಂಟಿಸಿರೋದು ನಿಜ. ಇದು ಸಣ್ಣ ವಿಚಾರಕ್ಕೆ ಆಗಿರುವುದು. ಅಮಾಯಕ ಬಲಿಯಾಗಿದ್ದಾನೆ ಅಂತ ಹೇಳಿದ್ದಾರೆ.

ಇನ್ನೂ ʻಬಳ್ಳಾರಿ ರಿಪಬ್ಲಿಕ್ʼ ಆಗಿದೆ ಎಂಬ ಬಿಜೆಪಿ ಆರೋಪ ತಳ್ಳಿಹಾಕಿದ ಜಮೀರ್, ಇದು ಅಂತಹ ಘಟನೆ ಅಲ್ಲ. ಸಣ್ಣ ಘಟನೆಗೆ ಗಲಾಟೆ ಆಗಿ ದೊಡ್ಡದಾಗಿದೆ. ಇದು ಆಗಬಾರದಿತ್ತು. ಈಗ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಗಲಾಟೆ ವಿಚಾರ ತನಿಖೆಗೆ ಸೂಚಿಸಿದ್ದೇನೆ: ಸಿದ್ದರಾಮಯ್ಯ

ಭರತ್ ರೆಡ್ಡಿ ಜೊತೆ ಮಾತಾಡ್ತೀನಿ: ಸತೀಶ್ ಜಾರಕಿಹೊಳಿ
ಘಟನೆ ಬಗ್ಗೆ ಸಚಿವ ಸತೀಶ್‌ ಜಾರಕಿಹೊಳಿ ಬೆಂಗಳೂರಿನಲ್ಲಿ ಮಾತನಾಡಿ, ಶನಿವಾರ ಸಂಜೆ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಆಗಬೇಕಿತ್ತು. ಜನಾರ್ದನ ರೆಡ್ಡಿ ಮನೆ ಮುಂದೆ ಪೋಸ್ಟರ್ ಹಾಕಿದ್ದಕ್ಕೆ ಘರ್ಷಣೆ ಆಗಿದೆ. ಕಾಂಗ್ರೆಸ್ ಕಾರ್ಯಕರ್ತನ ಸಾವಾಗಿದೆ. ಮೊದಲು ಪೊಲೀಸ್ ತನಿಖೆ ಆಗಬೇಕು. ಪೊಲೀಸ್ ಏನು ವರದಿ ಕೊಡ್ತಾರೆ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: PUBLiC TV Impact – ಮನೆ ತೆರವಿನಿಂದ ನಿರಾಶ್ರಿತರಾಗಿದ್ದ 36 ಕುಟುಂಬಕ್ಕೆ ಸೂರಿನ ಭಾಗ್ಯ

ಬ್ಯಾನರ್‌ ವಿಚಾರಕ್ಕೆ ಶುರುವಾದ ಗಲಾಟೆ ಈಗ ಬೇರೆ ಬೇರೆ ಟರ್ನ್ ತೆಗೆದುಕೊಂಡಿದೆ. ಭರತ್ ರೆಡ್ಡಿ ಜೊತೆ ಮಾತಾಡುತ್ತೇನೆ. ಕಾರ್ಯಕ್ರಮ ಆದ್ರೆ ನಾಳೆ ಹೋಗುತ್ತೇನೆ. ಪ್ರತಿಮೆ ಮಾಡಲು ಹಿಂದೆ ಆಗಿರಲಿಲ್ಲ. ಕಂಪ್ಲಿ ಶಾಸಕರು, ಭರತ್ ಎಲ್ಲ ಸೇರಿ ಪ್ರತಿಮೆ ಮಾಡಿದ್ದಾರೆ. ನಾವು ಅಲ್ಲಿ ಏನಾಗಿದೆ ನೋಡಬೇಕು. ಕಾರ್ಯಕ್ರಮ ಮುಂದೂಡಲು ಗಲಾಟೆ ನಡೆದಿದ್ದ ಅನ್ನೋದನ್ನ ನೋಡಬೇಕು ಅಂತೇಳಿದ್ದಾರೆ.

Share This Article