PVR ಆರ್ಭಟ, ತವರಲ್ಲೇ ಮುಂಬೈಗೆ ನೀರು ಕುಡಿಸಿದ ಬೆಂಗಳೂರು – ಆರ್‌ಸಿಬಿಗೆ 18 ರನ್‌ಗಳ ಜಯ

3 Min Read

ಮುಂಬೈ: ಬ್ಯಾಟಿಂಗ್‌ ಸ್ವರ್ಗ ವಾಂಖೆಡೆ ಮೈದಾನದಲ್ಲಿಂದು ನಡೆದ ಐಪಿಎಲ್‌ ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಉಭಯ ತಂಡದ ಆಟಗಾರರ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರೇಕ್ಷಕರಿಗೆ ರಸದೌತಣ ನೀಡಿತ್ತು. ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌ (PVR) ಫಿಫ್ಟಿ ಆಟದ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಮುಂಬೈ ವಿರುದ್ಧ 18 ರನ್‌ಗಳ ಗೆಲುವು ಸಾಧಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 240 ರನ್‌ ಪೇರಿಸಿತ್ತು. ಗೆಲುವಿಗೆ 241 ರನ್‌ ಗುರಿ ಪಡೆದ ಮುಂಬೈ ಇಂಡಿಯನ್ಸ್‌ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 222 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮುಂಬೈ ಎಡವಿದ್ದೆಲ್ಲಿ?
ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಮುಂಬೈ ಪವರ್‌ಪ್ಲೇನಲ್ಲಿ ಉತ್ತಮ ಆರಂಭವನ್ನೇ ಪಡೆದಿತ್ತು. ರಯಾನ್ ರಿಕಲ್ಟನ್‌ – ರೋಹಿತ್‌ ಜೋಡಿ ಅಬ್ಬರಿಸಲು ಶುರು ಮಾಡಿದ್ರು. ಆದ್ರೆ 13 ಎಸೆತಗಳಲ್ಲಿ 19 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ಗಾಯದ ಸಮಸ್ಯೆಯಿಂದ ಹೊರನಡೆದರು. ಈ ಬೆನ್ನಲ್ಲೇ 22 ಎಸೆತಗಳಲ್ಲಿ 37 ರನ್‌ ಗಳಿಸಿದ್ದ ರಿಕಲ್ಟನ್‌ ಕೂಡ ಪೆವಿಲಿಯನ್‌ಗೆ ಮರಳಿದ್ರು. ಅದೇ ಓವರ್‌ನಲ್ಲಿ ಬೌಂಡರಿ ಸಿಡಿಸಲು ಯತ್ನಿಸಿದ ತಿಲಕ್‌ ವರ್ಮಾ ಕ್ಯಾಚ್‌ ನೀಡಿ ಔಟಾದರು. ಇದು ರನ್‌ ವೇಗಕ್ಕೂ ಹೊಡೆತ ಬಿದ್ದಿತು.

ಫಲಿಸದ ಪಾಂಡ್ಯ-ಸೂರ್ಯ ಜೊತೆಯಾಟ
ಇನ್ನೂ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾದ ಮುಂಬೈಗೆ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌ ಆಸರೆಯಾಗಿದ್ದರು. 27 ಎಸೆತಗಳಲ್ಲಿ 47 ರನ್‌ಗಳ ಸಣ್ಣ ಜೊತೆಯಾಟವೊಂದನ್ನ ನೀಡಿದ್ದರು. ಆದ್ರೆ ಸೂರ್ಯಕುಮಾರ್‌ ಯಾದವ್‌ (33 ರನ್‌) ಔಟಾಗುತ್ತಿದ್ದಂತೆ ಮತ್ತೆ ಪೆವಿಲಿಯನ್‌ ಪರೇಡ್‌ ಶುರುವಾಯಿತು. ಅಬ್ಬರಿಸುತ್ತಿದ್ದ ನಾಯಕ ಹಾರ್ದಿಕ್‌ ಪಾಂಡ್ಯ 22 ಎಸೆತಗಳಲ್ಲಿ ಸ್ಫೋಟಕ 40 ರನ್‌ ಚಚ್ಚಿದ್ರೆ, ನಮನ್‌ ಧೀರ್‌ 1 ರನ್‌ಗೆ ವಿಕೆಟ್‌ ಒಪ್ಪಿಸಿದ್ರು. ಕೊನೆಯಲ್ಲಿ ಅಬ್ಬರಿಸಿದ ಶೆರ್ಫೇನ್ ರುದರ್ಫೋರ್ಡ್ 31 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್‌ಗಳೊಂದಿಗೆ ಸ್ಫೋಟಕ 71 ರನ್‌ ಬಾರಿಸಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ ಮುಂಬೈ ವಿರುದ್ಧ ಅಬ್ಬರಿಸಿತು. ನಾಯಕ ರಜತ್ ಪಾಟಿದಾರ್, ಫಿಲ್‌ಸಾಲ್ಟ್‌ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 240 ರನ್‌ ಪೇರಿಸಿತ್ತು.

ಆರ್‌ಸಿಬಿ ತಂಡದ ಆರಂಭಿಕರಾದ ಫಿಲ್‌ ಸಾಲ್ಟ್ ಹಾಗೂ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಪವರ್ ಪ್ಲೇನಲ್ಲಿ ಸ್ಫೋಟಕ 71 ರನ್‌ ಸೇರಿ ಮೊದಲ ವಿಕೆಟ್‌ಗೆ ಈ ಜೋಡಿ 10.5 ಓವರ್‌ಗಳಲ್ಲಿ 120 ರನ್‌ ಬಾರಿಸಿತ್ತು. ಈ ಜೋಡಿ ಮುಂಬೈ ತಂಡದ ಬೌಲರ್‌ಗಳನ್ನ ಬಹುವಾಗಿ ಕಾಡಿತು. ಸಾಲ್ಟ್‌ 36 ಎಸೆತಗಳಲ್ಲಿ 78 ರನ್‌ (6 ಬೌಂಡರಿ, 6 ಸಿಕ್ಸರ್) ಚಚ್ಚಿ, ಈ ಆವೃತ್ತಿಯಲ್ಲಿ ಮೊದಲ ಫಿಫ್ಟಿ ಬಾರಿಸಿದರು.

ರಜತ್‌ ಪಾಟಿದಾರ್ ಸ್ಫೋಟಕ ಆಟ
2ನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿಗೆ ಸಾಥ್ ನೀಡಲು ಬಂದ ನಾಯಕ ರಜತ್ ಪಾಟಿದಾರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. 2ನೇ ವಿಕೆಟ್‌ಗೆ ಕ್ರೀಸ್‌ಗೆ ಬಂದ ನಾಯಕ ಸಿಕ್ಸರ್‌ ಬೌಂಡರಿ ಬಾರಿಸುವ ಮೂಲಕ ಮುಂಬೈ ಬೌಲರ್‌ಗಳನ್ನ ಕಾಡಿದರು. ಕೊಹ್ಲಿ-ರಜತ್‌ ಜೋಡಿ 2ನೇ ವಿಕೆಟ್‌ಗೆ 23 ಎಸೆತಗಳಲ್ಲಿ 65 ರನ್‌ ಪೇರಿಸಿತ್ತು. ಈ ವೇಳೆ ವಿರಾಟ್ ಕೊಹ್ಲಿ ಸಹ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 38 ಎಸೆತಗಳಲ್ಲಿ 50 ರನ್‌ ಸಿಡಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದರು.

ಮುಂಬೈ ವಿರುದ್ಧ ಅಬ್ಬರಿಸಿದ ರಜತ್‌ ಪಾಟಿದಾರ್‌ 20 ಎಸೆತಗಳಲ್ಲಿ 53 ರನ್‌ (4 ಬೌಂಡರಿ, 5 ಸಿಕ್ಸರ್‌) ಸಿಡಿಸಿದರು. ಇನ್ನುಳಿದಂತೆ ಟೀಮ್ ಡೇವಿಡ್‌ 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 34 ರನ್‌, ಜಿತೇಶ್‌ ಶರ್ಮಾ 10 ರನ್‌, ರೊಮಾರಿಯೋ ಶೆಫರ್ಡ್‌ 2 ರನ್‌ ಕೊಡುಗೆ ನೀಡಿದರು. ‌

Share This Article