ಹಿಂಗೆ ಬೆಂಕಿ ಬೌಲಿಂಗ್‌ಗೆ ರಾಯಲ್ಸ್‌ ಬರ್ನ್‌ – ಹೈದ್ರಾಬಾದ್‌ನಲ್ಲಿ ಸನ್‌ ಶೈನಿಂಗ್‌

2 Min Read

ಹೈದರಾಬಾದ್‌: ಆರಂಭದಲ್ಲಿ ನಾಯಕ ಇಶನ್‌ ಕಿಶನ್‌ ಅವರ ಸ್ಫೋಟಕ ಅರ್ಧಶತಕ ನಂತರ ಪ್ರಫುಲ್‌ ಹಿಂಗೆ ಅವರ ಮಾರಕ ಬೌಲಿಂಗ್‌ನಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಹೈದರಾಬಾದ್‌ ಸನ್‌ರೈಸರ್ಸ್‌ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಎಸ್‌ಆರ್‌ಹೆಚ್‌ 6 ವಿಕೆಟ್‌ ನಷ್ಟಕ್ಕೆ 216 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್‌ ಆಯ್ತು

ಕೇವಲ 9 ರನ್‌ಗಳಿಗೆ ರಾಯಲ್ಸ್ 5 ವಿಕೆಟ್ ಕಳೆದುಕೊಳ್ಳುವಾಗಲೇ ಸೋಲು ಖಚಿತವಾಗಿತ್ತು, ಪ್ರಫುಲ್ ಹಿಂಗೆ, ಮೊದಲ ಓವರ್‌ನಲ್ಲೇ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಮತ್ತು ಲುವಾನ್-ಡ್ರೆ ಪ್ರಿಟೋರಿಯಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಮೊದಲ 10 ಓವರ್‌ಗಳಲ್ಲಿ ರಾಯಲ್ಸ್ ತಂಡ 5 ವಿಕೆಟ್ ನಷ್ಟಕ್ಕೆ 70 ರನ್‌ಗಳನ್ನು ಕಲೆ ಹಾಕಿತು. ನಾಯಕ ರಿಯಾನ್ ಪರಾಗ್ ಕೇವಲ 4 ರನ್‌ಗಳಿಗೆ ಔಟಾದರು. ಯಶಸ್ವಿ ಜೈಸ್ವಾಲ್ 5 ಎಸೆತಗಳಿಗೆ ಕೇವಲ 1 ರನ್ ಕಲೆ ಹಾಕಿದರು.

6ನೇ ವಿಕೆಟ್‌ಗೆ ರವೀಂದ್ರ ಜಡೆಜ ಹಾಗೂ ಡೊನೊವನ್ ಫೆರೀರಾ ಜೊತೆಯಾಟವಾಡಿ 72 ಎಸೆತಗಳಿಗೆ 118 ರನ್ ಕಲೆಹಾಕಿ ತಂಡದ ಮೊತ್ತವನ್ನು ಏರಿಸಿದರು. ಡೊನೊವನ್ ಫೆರೀರಾ 44 ಎಸೆತಗಳಿಗೆ 69 ರನ್ ಗಳಿಸಿ ಔಟಾದರು. ರವೀಂದ್ರ ಜಡೆಜಾ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತುಷಾರ್ ದೇಶಪಾಂಡೆ (25 ರನ್), ಜೋಫ್ರಾ ಆರ್ಚೆರ್ (2 ರನ್), ನಾಂಡ್ರೆ ಬರ್ಗರ್ (3 ರನ್) ಗಳಿಸಿದರು.

ಪ್ರಫುಲ್‌ ಹಿಂಗೆ 4 ವಿಕೆಟ್‌ ಪಡೆದರೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದ ಸಕೀಬ್ ಹುಸೇನ್ ಅವರೂ 4 ವಿಕೆಟ್‌ ಕಿತ್ತರು. ಎಶಾನ್ ಮಾಲಿಂಗ 2 ವಿಕೆಟ್‌ ಪಡೆದರು.

ಮೊದಲಿಗೆ ಬ್ಯಾಟ್ ಬೀಸಿದ ಸನ್ ರೈಸರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಭಿಷೇಕ್ ಶರ್ಮಾ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ವೇಗಿ ಜೋಫ್ರಾ ಆರ್ಚರ್ ಎಸೆತವನ್ನು ವೇಗವಾಗಿ ಬಾರಿಸಿದ ಶರ್ಮಾ, ಬೌಂಡರಿ ಗೆರೆ ಬಳಿ ಇದ್ದ ರವಿ ಬಿಷ್ಣೋಯಿಗೆ ಕ್ಯಾಚ್ ನೀಡಿ ಔಟಾದರು. ನಂತರ ಕ್ರೀಸ್‌ಗಿಳಿದ ನಾಯಕ ಇಶಾನ್ ಕಿಶನ್, ಟ್ರಾವಿಸ್ ಹೆಡ್ (18 ರನ್) ಜೊತೆಗೂಡಿ 2ನೇ ವಿಕೆಟ್‌ಗೆ 55 ರನ್ ಕಲೆಹಾಕಿದರು.

ನಂತರ ಹೆನ್ರಿಚ್ ಕ್ಲಾಸೆನ್ ಜೊತೆ 3ನೇ ವಿಕೆಟ್‌ಗೆ ಇಶಾನ್ ಕಿಶನ್ 39 ಎಸೆತಗಳಿಗೆ 88 ರನ್‌ಗಳ ಜೊತೆಯಾಟವಾಡಿದರು. ಕೇವಲ 44 ಎಸೆತಗಳಲ್ಲಿ ಇಶಾನ್ ಕಿಶನ್ 8 ಬೌಂಡರಿ ಹಾಗೂ 6 ಸಿಕ್ಸರ್ ಬಾರಿಸಿ 91 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ಇದ್ದಾಗಲೇ ಕ್ಯಾಚ್‌ ಔಟಾದರು. ಕ್ಲಾಸೆನ್ 40 ರನ್ ಗಳಿಸಿ ಔಟಾದರು. ಕೊನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ (28), ಸಲೀಲ್ ಅರೋರ (24) ರನ್ ಹೊಡೆದ ಕಾರಣ ತಂಡದ ಮೊತ್ತ 200 ರನ್‌ಗಳ ಗಡಿ ದಾಟಿತು.

ರಾಯಲ್ಸ್ ಪರವಾಗಿ ವೇಗಿ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರೆ ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಮತ್ತು ನಾಯಕ ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಕಿತ್ತರು.

Share This Article