ರಾಜಸ್ಥಾನಕ್ಕೆ ಹೀನಾಯ ಸೋಲು – 36 ರನ್‌ಗಳ ಜಯ, ಫೈನಲಿಗೆ ಹೈದರಾಬಾದ್‌

Public TV
2 Min Read

ಚೆನ್ನೈ: ಅತ್ಯುತ್ತಮ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಿಂದಾಗಿ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ 36 ರನ್‌ಗಳಿಂದ ಜಯ ಸಾಧಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಮೂರನೇ ಬಾರಿ ಐಪಿಎಲ್‌ ಫೈನಲ್‌ (IPL Final) ಪ್ರವೇಶಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 9 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತು.

ರಾಜಸ್ಥಾನ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 42 ರನ್(‌ 21 ಎಸೆತ, 4 ಬೌಂಡರಿ, 3 ಸಿಕ್ಸರ್‌) ಧ್ರುವ್‌ ಜುರೇಲ್‌ ಔಟಾಗದೇ 56 ರನ್‌ (35 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಶಹಬಾಜ್ ಅಹಮದ್ 3 ವಿಕೆಟ್‌, ಅಭಿಷೇಕ್‌ ಶರ್ಮಾ 2 ವಿಕೆಟ್‌ ಪಡೆದರು.

ಹೈದರಾಬಾದ್‌ ಪರ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 5 ಎಸೆತಗಳಲ್ಲಿ 12 ರನ್‌ ಸಿಡಿಸಿ ಔಟಾದರು. ಟ್ರಾವಿಸ್‌ ಹೆಡ್‌ 34 ರನ್‌(28 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಾಹುಲ್‌ ತ್ರಿಪಾಠಿ 37 ರನ್‌(15 ಎಸೆತ, 5 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ವಿಕೆಟ್‌ ಉರುಳುತ್ತಿದ್ದರೂ ಹೆನ್ರಿಕ್ ಕ್ಲಾಸೆನ್ ಅವರು ಗಟ್ಟಿಯಾಗಿ ನಿಂತು 50 ರನ್‌ (34 ಎಸೆತ, 4 ಸಿಕ್ಸರ್)‌ ಸಿಡಿಸಿ ವಿಕೆಟ್‌ ಒಪ್ಪಿಸಿದರು.

ಚೆನ್ನೈ ಸ್ಟೇಡಿಯಂನಲ್ಲಿ ಮೇ 26 ಭಾನುವಾರ ಫೈನಲ್‌ ಪಂದ್ಯ ನಡೆಯಲಿದ್ದು ಇಂದು ಜಯಗಳಿಸಿದ ಹೈದರಾಬಾದ್‌ ಮತ್ತು ಕೋಲ್ಕತ್ತಾ ಕಪ್‌ಗಾಗಿ ಹೋರಾಟ ನಡೆಸಲಿವೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಕೋಲ್ಕತ್ತಾ (Kolkata Knight Riders) ಮತ್ತು ಹೈದರಾಬಾದ್‌ ಸೆಣಸಾಡಿದ್ದವು. ಈ ಪಂದ್ಯವನ್ನು ಕೋಲ್ಕತ್ತಾ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಹೈದರಾಬಾದ್‌ 159 ರನ್‌ಗಳಿಗೆ ಆಲೌಟ್‌ ಆಗಿತ್ತು. ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆದು ಫೈನಲ್‌ ಪ್ರವೇಶಿಸಿತ್ತು.

Share This Article