– ಆಲೂರಲ್ಲಿ ಸಿಡಿಲಿಗೆ ವೃದ್ಧೆ ಬಲಿ
– ರಾಣೇಬೆನ್ನೂರಲ್ಲಿ ಕೆರೆಯಂತಾದ ರಸ್ತೆಗಳು
– ಸಿಎಂ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆ
– ಉಡುಪಿಯಲ್ಲಿ ಮಳೆಯಿಂದ ನಿಟ್ಟುಸಿರುಬಿಟ್ಟ ಜನ
ಚಿಕ್ಕಮಗಳೂರು: ಜಿಲ್ಲೆಯ (Chikkamagaluru) ಹಲವೆಡೆ ಭಾರೀ (Rain) ಮಳೆಯಾಗುತ್ತಿದೆ. ಪರಿಣಾಮ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಎನ್.ಆರ್.ಪುರ ತಾಲೂಕಿನ ಆಮ್ತಿ ಬಳಿ ಬೃಹತ್ ಮರವೊಂದು ಬಿದ್ದಿದ್ದು, ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇನ್ನೂ ಮರ ಬಿದ್ದಿದ್ದರಿಂದ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ಎರಡೂ ಬದಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಿಯರಿಂದ ಬೃಹತ್ ಮರ ತೆರವು ಕಾರ್ಯ ನಡೆಯುತ್ತಿದೆ.
ಮೂಡಿಗೆರೆ-ಕಳಸ ತಾಲೂಕಿನಲ್ಲೂ ಭಾರೀ ಗಾಳಿ ಮಳೆಯಾಗುತ್ತಿದೆ. ಕಳಸ ತಾಲೂಕಿನ ಕುದುರೆಮುಖ ಟಿಬಿ ಸರ್ಕಲ್‌ನಲ್ಲಿ ಮರ ಧರೆಗುರುಳಿದೆ. ಹಲವೆಡೆ ಭೂಮಿಯಿಂದ 100 ಅಡಿ ಎತ್ತರಕ್ಕೆ ಶೀಟ್‌ಗಳು ಹಾರಿವೆ. ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಆರು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಅಲಗೇಶ್ವರ ಗ್ರಾಮದಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ವಿದ್ಯುತ್ ಕಂಬ, ಮರಗಳು
ಚಾಮರಾಜನಗರದಲ್ಲೂ ಭಾರೀ ಮಳೆ
ಜಿಲ್ಲೆಯ (Chamarajanagar) ಗುಂಡ್ಲುಪೇಟೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದಾನೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆಯಾಗಿದೆ. ಗುಂಡ್ಲುಪೇಟೆ ಭಾಗದ 110 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದರು.
ಹಾಸನದಲ್ಲೂ ಗುಡುಗು ಸಹಿತ ಮಳೆ
ಹಾಸನ (Hassan) ಜಿಲ್ಲೆಯ ವಿವಿಧೆಡೆ ಸಂಜೆ ವೇಳೆಗೆ ವರುಣ ಅಬ್ಬರಿಸಿದ್ದಾನೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಮನೆಗಳಿಗೆ ಹಾಕಿದ್ದ ಶೀಟ್‍ಗಳು ಹಾರಿ ಹೋಗಿವೆ. ಮಳೆಗೆ ಕಾಲೇಜು ಕಟ್ಟಡ, ಬಿಜಿಎಸ್ ಸಮುದಾಯಭವನ ಹಾಗೂ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿದ್ದ ಶೀಟ್‍ಗಳು ಹಾರಿ ಬಂದು ರಸ್ತೆಗೆ ಬಿದ್ದಿವೆ. ವಾಸದ ಮನೆಯ ಶೀಟ್‍ಗಳು ಸಹ ಹಾರಿ ಹೋಗಿದ್ದು, ಮನೆಯೊಳಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯುಂಟಾಗಿದೆ.
ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಎರಡು ಕಾರುಗಳು ಜಖಂಗೊಂಡಿವೆ. ಮರದ ಕೊಂಬೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ತಂತಿಗಳು ತುಂಡಾಗಿದ್ದು ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಆಲೂರು ತಾಲೂಕಿನ ಕುಂದೂರು ಹೋಬಳಿಯ ಹುಲಕುಂದ ಎಸ್ಟೇಟ್ ಸಮೀಪ ದನ ಮೇಯಿಸಲು ತೆರಳಿದ್ದ ವೃದ್ಧೆ ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರನ್ನು ಗ್ರಾಮದ ನೀಲಮ್ಮ (70) ಎಂದು ಗುರುತಿಸಲಾಗಿದೆ.
ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ
ಜಿಲ್ಲೆಯ (Haveri) ರಾಣೇಬೆನ್ನೂರು, ಬ್ಯಾಡಗಿ ಸೇರಿದಂತೆ ವಿವಿಧ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಮಳೆಗೆ ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಾಣೇಬೆನ್ನೂರು ನಗರದಲ್ಲಿ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಕೆಲಕಾಲ ವಾಹನ ಸವಾರರು ಪರದಾಡಿದ್ದಾರೆ.
ಮಳೆಯಿಂದ ನಿಟ್ಟುಸಿರು ಬಿಟ್ಟ ಕರಾವಳಿ ಜನ
ಉಡುಪಿ (Udupi) ಜಿಲ್ಲೆಯ ಹಲವು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹಗಲೆಲ್ಲ ವಿಪರೀತ ಬಿಸಿಲಿನಿಂದ ಕಂಗಾಲಾಗಿದ್ದ ನಾಗರಿಕರು ಮಳೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು





