ದೇಶದ ಮೊದಲ ‘ಗಾರ್ಬೇಜ್ ಕೆಫೆ’- ಪ್ಲಾಸ್ಟಿಕ್ ತ್ಯಾಜ್ಯ ಕೊಟ್ರೆ ಊಟ ಫ್ರೀ

Public TV
2 Min Read

ರಾಯ್ಪುರ್: ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಹಾನಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಆಗದಿದ್ದರೂ ಅಲ್ಪ ಪ್ರಮಾಣದಲ್ಲಿ ಪರಿಸರವನ್ನು ಉಳಿಸಲು ಛತ್ತೀಸ್‍ಗಢದ ಅಂಬಿಕಾಪುರ ಮಹಾನಗರ ಪಾಲಿಕೆ ಹೊಸ ಉಪಾಯ ಮಾಡಿದೆ.

ಅಂಬಿಕಾಪುರ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಡಿ ಗಾರ್ಬೇಜ್ ಕೆಫೆ ತೆರೆಯುವ ಪ್ರಯತ್ನಕ್ಕೆ ಕೈಹಾಕಿದೆ. ಪ್ಲಾಸ್ಟಿಕ್ ಚಿಂದಿ ಆಯುವ ನಿರಾಶ್ರಿತರಿಗೆ ‘ಗಾರ್ಬೇಜ್ ಕೆಫೆ’ ಹೆಸರಿನಲ್ಲಿ ಹೋಟೆಲ್ ತೆರೆಯಲು ಅಂಬಿಕಾಪುರ ಮಹಾನಗರ ಪಾಲಿಕೆ ನಿರ್ಧರಿಸಿದೆ.

ಈ ಹೋಟೆಲ್ ಬಡ ಜನರಿಗೆ ಕೂಡ ಅನುಕೂಲವಾಗಲಿದೆ. ಅಲ್ಲದೆ ಈ ಹೋಟೆಲ್‍ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟರೆ ಉಪಹಾರ, ಊಟವನ್ನು ಉಚಿತವಾಗಿ ಕೊಡಲಾಗುತ್ತದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಒಂದೆಡೆ ಸಂಗ್ರಹವಾಗುತ್ತದೆ. ಇದರಿಂದ ನಗರದ ರಸ್ತೆಗಳು ಪ್ಲಾಸ್ಟಿಕ್ ಮುಕ್ತ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

ಗಾರ್ಬೇಜ್ ಕೆಫೆಯಲ್ಲಿ ಒಂದು ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಊಟ ಹಾಗೂ ಅರ್ಧ ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಉಪಾಹಾರ ನೀಡಲಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಈ ಗಾರ್ಬೆಜ್ ಕೆಫೆ ಒಂದು ವಿನೂತನ ಪ್ರಯತ್ನವಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಈ ರೀತಿ ಗಾರ್ಬೆಜ್ ಕೆಫೆ ನಿರ್ಮಾಣವಾಗಲಿದೆ.

ಚಿಂದಿ ಆಯುವವರ ಹೊಟ್ಟೆ ತುಂಬಿಸುವುದೇ ಈ ವಿನೂತನ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟರೆ ಪಾಲಿಕೆ ವತಿಯಿಂದ ಉಚಿತ ಊಟ, ಉಪಾಹಾರ ನೀಡಲಾಗುತ್ತದೆ. ಕೆಫೆಯಲ್ಲಿ ಸಂಗ್ರಹಿಸಲಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣ ಕಾರ್ಯಕ್ಕೆ ಬಳಸಲು ಪಾಲಿಕೆ ಚಿಂತನೆ ನಡೆಸಿದೆ.

ಈ ‘ಗಾರ್ಬೇಜ್ ಕೆಫೆ’ ಯೋಜನೆಗಾಗಿ ಅಂಬಿಕಾಪುರ ಮಹಾನಗರ ಪಾಲಿಕೆ ಕಡೆಯಿಂದ ವರ್ಷಕ್ಕೆ 5 ಲಕ್ಷ ರೂ. ಅನುದಾನವನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಅಲ್ಲದೆ ಈ ಯೋಜನೆಯನ್ನು ವಿಸ್ತರಿಸಲು ಪಾಲಿಕೆ ಯೋಚಿಸುತ್ತಿದೆ. ಮುಂದೆ ಅದು ಕಾರ್ಯರೂಪಕ್ಕೆ ಬಂದರೆ ಪ್ಲಾಸ್ಟಿಕ್ ಸಂಗ್ರಹಿಸಿ ತಂದು ಕೊಟ್ಟರೆ ಪಾಲಿಕೆ ವತಿಯಿಂದ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡುವುದಾಗಿ ತೀಳಿಸಿದೆ.

ಸದ್ಯ ಸ್ವಚ್ಛತಾ ಅಭಿಯಾನದ ಪಟ್ಟಿಯಲ್ಲಿ ಇಂಧೋರ್ ಬಳಿಕ ಛತ್ತೀಸ್‍ಗಢದ ಅಂಬಿಕಾನಗರ ಈಗ 2ನೇ ಸ್ವಚ್ಛ ನಗರವಾಗಿದೆ. ಅಲ್ಲದೆ ಈಗಾಗಲೇ ನಗರದ ಕೆಲವು ರಸ್ತೆಗಳನ್ನು ಡಾಂಬರು ಹಾಗೂ 8 ಲಕ್ಷ ಪ್ಲಾಸ್ಟಿಕ್ ಚೀಲಗಳ ಮೂಲಕ ನಿರ್ಮಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *