ನಿಮ್ಮ ಕೆಟ್ಟ ರಾಜಕಾರಣಕ್ಕಾಗಿ ಕರ್ನಾಟಕದ ಅಖಂಡತೆಗೆ ಕಿಚ್ಚು ಹಚ್ಚುವ ಕೆಲಸ ಬೇಡ: ಬಿಎಸ್‍ವೈ

Public TV
2 Min Read

ಬೆಂಗಳೂರು: ನಿಮ್ಮ ಕೆಟ್ಟ ರಾಜಕಾರಣಕ್ಕಾಗಿ ಕರ್ನಾಟಕದ ಅಖಂಡತೆಗೆ ಕಿಚ್ಚು ಹಚ್ಚುವ ಕೆಲಸ ಮಾಡೋದು ಬೇಡ. ಉತ್ತರ ಕರ್ನಾಟಕದ ಇಂದಿನ ದುಸ್ಥಿತಿಗೆ ಕಾರಣ ಸಿಎಂ ಕುಮಾರಸ್ವಾಮಿ ಹೇಳಿಕೆ ಕಾರಣ. ಸಿಎಂಗೆ ಜವಾಬ್ದಾರಿ ಇದ್ದರೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.

ಯಾವ ಕಾರಣಕ್ಕೂ ಉತ್ತರ ಕರ್ನಾಟಕದ ಜನರ ಬಾಯಿಂದ ಪ್ರತ್ಯೇಕತೆಯ ಕೂಗು ಬರಬಾರದು. ವಿರೋಧ ಪಕ್ಷವಾಗಿ ಬಿಜೆಪಿ ನಿಮ್ಮ ಜೊತೆಯಲ್ಲಿದೆ. ಶಾಂತಿ, ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಸಹಕರಿಸಬೇಕು. ಪ್ರತ್ಯೇಕ ರಾಜ್ಯದ ಹೇಳಿಕೆಗಳನ್ನು ಬಿಜೆಪಿ ಬೆಂಬಲಿಸಲ್ಲ. ಪ್ರತ್ಯೇಕ ರಾಜ್ಯ ಬೇಕೆಂದು ಹೇಳಿಕೆ ನೀಡಿರುವ ಶಾಸಕ ಶ್ರೀರಾಮುಲು ಜೊತೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಕುಮಾರಸ್ವಾಮಿಯವರಲ್ಲಿ ಅಧಿಕಾರ ದಾಹವಿದ್ದು, ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ ಅಂತ ಒಡೆದು ಆಳುವ ನೀತಿಯಲ್ಲಿ ತೊಡಗಿದ್ದಾರೆ. ಉತ್ತರ ಕರ್ನಾಟಕ ಬಂದ್‍ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರಣವಾಗಿದ್ದು, ಸಿಎಂ ನಿಲುವಿನ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಕೆಟ್ಟ ರಾಜಕಾರಣಕ್ಕಾಗಿ ಕರ್ನಾಟಕದ ಅಖಂಡತೆಗೆ ಕಿಚ್ಚು ಹಚ್ಚುವ ಕೆಲಸ ನಡೆದಿದ್ದು, ಕರ್ನಾಟಕ ಜನತೆಯ ಕ್ಷಮೆಯಾಚಿಸಬೇಕು. ಅಖಂಡ ಕರ್ನಾಟಕ ಬಿಜೆಪಿಯ ಗುರಿಯಾಗಿದ್ದು, ಯಾವುದೇ ಕಾರಣಕ್ಕೂ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸೆಂಬರ್ ಒಳಗೆ ಬಿಜೆಪಿ ಸರ್ಕಾರ ಬರುತ್ತೆ ಅನ್ನೋದ್ರ ಬಗ್ಗೆ ನಾನು ಭವಿಷ್ಯ ಹೇಳಲ್ಲ. ಆದ್ರೆ ಸಮ್ಮಿಶ್ರ ಸರ್ಕಾರ ಅವರ ಜಗಳ, ಬಡಿದಾಟದಿಂದ ಬಿದ್ದರೆ ನಾವೇನ್ ಮಾಡೋದಕ್ಕೆ ಆಗುತ್ತೆ..? ಪುತ್ರವಿಜಯೇಂದ್ರ ಅಗತ್ಯವಿರುವ ಕಡೆ ರಾಜ್ಯ ಪ್ರವಾಸ ಮಾಡಲಿದ್ದು, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಲೋಕಸಭಾ ಅಧಿವೇಶನದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತದೆ. ಸಂಸರೆ ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದಗೌಡ ಕ್ಷೇತ್ರಗಳ ಅದಲು ಬದಲಾಗುತ್ತದೆ ಎಂಬುದು ಕೇವಲ ಊಹಾಪೋಹ. ಆ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ತಿಳಿಸಿದರು.

ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧ ಮಾಡುವುದು ಅಕ್ಷಮ್ಯ ಅಪರಾಧ. ಈ ಅದೇಶ ಕುಮಾರಸ್ವಾಮಿಯವರ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ. ರಾಜ್ಯ ಸರ್ಕಾರದ ಹಗರಣಗಳ ಸರಮಾಲೆಯನ್ನು ಮಾಧ್ಯಮಗಳು ಬಯಲಿಗೆಳೆಯುತ್ತೆವೆ ಎಂಬ ಭಯದಿಂದ ನಿರ್ಬಂಧ ಹಾಕಿರಬಹುದು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನು ತಡೆಹಿಡಿಯುವ ಯತ್ನವನ್ನು ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮುಂದುವರೆದರೆ ಬಿಜೆಪಿ ಶಾಸಕರು ವಿಧಾನಸೌಧದ ಮುಂದೆ ಮಾಧ್ಯಮಗಳ ಪರವಾಗಿ ಧರಣಿ ಕೂರುತ್ತೇವೆ ಎಂದು ಎಚ್ಚರಿಸಿದರು.

Share This Article
Leave a Comment

Leave a Reply

Your email address will not be published. Required fields are marked *