– ಅಲ್ಪಸಂಖ್ಯಾತರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂದ ಡಿಸಿಎಂ
ಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ (Davangere, Bagalkote) ಉಪ ಚುನಾವಣೆಗೆ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಆಗಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ?(DK Shivakumar) ತಿಳಿಸಿದರು.
ಕಾಂಗ್ರೆಸ್ ನಿಂದ ಅಭ್ಯರ್ಥಿ ಘೋಷಣೆ ಆದ ಬಳಿಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿ ಪ್ರತಿಕ್ರಿಯೆ ನೀಡಿದ ಅವರು, ಬಾಗಲಕೋಟೆ ವಿಧಾನಸಭೆ ಟಿಕೆಟ್ ಅನ್ನು ಹೆಚ್.ವೈ ಮೇಟಿ ಅವರ 2ನೇ ಮಗ ಉಮೇಶ್ ಮೇಟಿ ಅವರಿಗೆ ಹಾಗೂ ದಾವಣಗೆರೆ ದಕ್ಷಿಣ ಟಿಕೆಟ್ ಅನ್ನು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿದೆ ಎಂದರು. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ; ಶಾಮನೂರು ಮೊಮ್ಮಗನಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್
ನಾನು, ಮುಖ್ಯಮಂತ್ರಿಯವರು ಹಾಗೂ ಜಮೀರ್ ಅಹಮದ್, ನಾಸಿರ್ ಹುಸೇನ್, ಸಲೀಂ ಅಹ್ಮದ್, ಹ್ಯಾರಿಸ್, ಜಬ್ಬಾರ್ ಅವರು ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜೊತೆ ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದು ಶಾಮನೂರು ಅವರ ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಗ್ಗಟ್ಟಿನಿಂದ ಉಪ ಚುನಾವಣೆ (By Election) ಮಾಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಮಗನ ಬಿ ಫಾರಂ ಅನ್ನು ತಂದೆಯವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರ ಕೈಯಲ್ಲಿ ಕೊಡಲಾಗಿದೆ. ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆಗೆ ನಾನು ಹಾಗೂ ಮುಖ್ಯಮಂತ್ರಿಯವರು ತೆರಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸುತ್ತೇವೆ. ಟಿಕೆಟ್ ವಿಚಾರವಾಗಿ ಮಾಧ್ಯಮಗಳು ಮಾಡುತ್ತಿದ್ದ ವಿಭಿನ್ನ ಚರ್ಚೆಗಳಿಗೆ ತೆರೆ ಎಳೆಯಲಾಗಿದೆ. ಹೈಕಮಾಂಡ್ ಟಿಕೆಟ್ ಹಂಚಿಕೆ ಬಗ್ಗೆ ತಡರಾತ್ರಿ ತಿಳಿಸಿತು ಅಂತ ತಿಳಿಸಿದರು. ಇದನ್ನೂ ಓದಿ: 8,931 ದಿನಗಳ ಆಡಳಿತ; ಸಿಎಂ, ಪಿಎಂ ಆಗಿ ಮೋದಿ ಐತಿಹಾಸಿಕ ದಾಖಲೆ
ಬುಧವಾರ ಶಾಸಕಾಂಗ ಪಕ್ಷದ ಸಭೆಯನ್ನು ನಿಗಧಿ ಮಾಡಲಾಗಿದೆ. ಎಐಸಿಸಿ ಕಾರ್ಯದರ್ಶಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ ಅಂತ ಮಾಹಿತಿ ನೀಡಿದರು. ದಾವಣಗೆರೆ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರು ಸಮಾಧಾನಗೊಂಡಿದ್ದಾರೆಯೇ ಎಂದು ಕೇಳಿದಾಗ, ಅವರುಗಳು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಜನಸಂಖ್ಯೆ ಆಧಾರದ ಮೇಲೆ ಕೇಳುತ್ತಿದ್ದಾರೆ. ಅವರದ್ದು ತಪ್ಪಿಲ್ಲ. ದಿನಾಂಕ ಚೆನ್ನಾಗಿದೆ ಎಂದು ನಾಮಪತ್ರ ಸಲ್ಲಿಕೆ ಮಾಡಿರುವುದಾಗಿ ಮಲ್ಲಿಕಾರ್ಜುನ್ ಅವರು ಹೇಳಿದರು. ನಮಗೂ ನಂಬಿಕೆ ಇದ್ದಂತೆ ಅವರಿಗೂ ಇದೆ. ಪಕ್ಷ ಹೇಳಿದರೆ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ಸಮರ್ಥ್ ಅವರ ತಾಯಿ ಪ್ರಭಾ ಮಲ್ಲಿಕಾರ್ಜುನ ಅವರಿಗೂ ಸಂಸದ ಸ್ಥಾನಕ್ಕೆ ನಿಲ್ಲಲು ಇಷ್ಟ ಇರಲಿಲ್ಲ. ಒತ್ತಾಯದಿಂದ ನಿಲ್ಲಿಸಿದ್ದು. ಮಲ್ಲಿಕಾರ್ಜುನ್ ಅವರಿಗೂ ಇಷ್ಟ ಇರಲಿಲ್ಲ. ಈಗ ಅವರು ಪಕ್ಷದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರು ಏನಾದರೂ ಬೇಡಿಕೆಗಳನ್ನು ಇಟ್ಟಿದ್ದಾರೆಯೇ ಎಂದು ಕೇಳಿದಾಗ, ಕೇಳ್ತಾರೆ, ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ಮಲ್ಲಿಕಾರ್ಜುನ್ ಅವರೂ ಬದ್ಧರಾಗಿದ್ದಾರೆ. ನಾನೂ ಬದ್ಧನಾಗಿದ್ದೇನೆ. ಕನಕಪುರದಲ್ಲಿ ನಿಲ್ಲಬೇಡ ಅಂದ್ರೆ ನಾನೂ ನಿಲ್ಲಲ್ಲ. ಅಲ್ಪಸಂಖ್ಯಾತ ಸಮುದಾಯದ ಗೊಂದಲ ನಿವಾರಣೆ ಆಗಿದೆಯೇ ಎಂದು ಕೇಳಿದಾಗ, ಆಸೆ ಪಡುವುದು ತಪ್ಪಲ್ಲ. ಮೇಟಿ ಕುಟುಂಬದಲ್ಲಿ ನನಗೆ ಮಲ್ಲಿಕಾರ್ಜುನ ಅವರಿಗೆ ನೀಡುವುದಕ್ಕೆ ಆಸೆಯಿತ್ತು. ಜಿಲ್ಲಾ ಪಂಚಾಯತಿ ಸದಸ್ಯೆಯಾದ ಇನ್ನೊಬ್ಬ ಮಗಳು ಟಿಕೆಟ್ ಕೇಳಿದ್ದರು. ಇನ್ನೊಬ್ಬ ಮಗಳು ಸೇರಿದಂತೆ ಒಟ್ಟು ಅವರ ಕುಟುಂಬದಲ್ಲಿಯೇ 4 ಜನ ಕೇಳಿದ್ದರು. ಕುಟುಂಬದಲ್ಲಿಯೇ ಆಸೆ ಇರುವಾಗ ಬೇರೆಯವರಿಗೂ ಇರುತ್ತದೆ. ಬಾಗಲಕೋಟೆಗೆ ಬೇರೆ, ಬೇರೆ ಹೆಸರುಗಳೂ ಬಂದಿತ್ತು ಎಂದರು.
ಬಿಜೆಪಿ ಜೆಡಿಎಸ್ ಅವರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿರುವ ಬಗ್ಗೆ ಕೇಳಿದಾಗ, ಗೊತ್ತು, ಈ ಎಲ್ಲಾ ಪ್ರಯತ್ನ ನಡೆಯುತ್ತಾ ಇದೆ. ರಾಜಕಾರಣ ಅಂದ ಮೇಲೆ ಅವರು ಡಿಫರೆನ್ಸ್ ಉಂಟು ಮಾಡುತ್ತಾರೆ, ನಾವೂ ಮಾಡುತ್ತೇವೆ. ಅವರಲ್ಲಿ ಒಮ್ಮತ ಇದೆಯೇ? ಇಬ್ಬರು ಗಲಾಟೆ ಮಾಡಿದ್ದಕ್ಕೆ ಮೂರನೆಯವರಿಗೆ ನೀಡಿದ್ದಾರೆ. ನಾನು ಏಕೆ ಅದನ್ನು ಚರ್ಚೆ ಮಾಡಲು ಹೋಗಲಿ. ಅದು ಅವರ ಪಕ್ಷದ ತೀರ್ಮಾನ ಇದು ನಮ್ಮ ಪಕ್ಷದ ತೀರ್ಮಾನ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಹಣ ಮೀಸಲಿಡಬೇಕು: ಬೊಮ್ಮಾಯಿ
ಇನ್ನೂ ಪ್ರತಿಪಕ್ಷಗಳ ಅಭ್ಯರ್ಥಿಗಳು ಸಮರ್ಥರಿದ್ದಾರೆಯೇ ಎಂದು ಕೇಳಿದಾಗ, ನಮ್ಮದು ನಮಗೆ, ಅವರದ್ದು ಅವರಿಗೆ. ಬೇರೆ ಪಕ್ಷಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಯಾವ ಅಭ್ಯರ್ಥಿಗಳನ್ನು ಸಹ ಬೇಕಾದರೂ ಹಾಕಲಿ. ದಾವಣಗೆರೆಗೆ ಶಿವಶಂಕರಪ್ಪ ಅವರು ಮಾಡಿರುವ ಸೇವೆ, ಅಭಿವೃದ್ಧಿ ಅತ್ಯುತ್ತಮವಾಗಿದೆ. ಬೆಂಗಳೂರು ನಗರ ಯಾವ ರೀತಿ ಇದೆಯೋ ಅದಕ್ಕಿಂತ ಚೆನ್ನಾಗಿ ದಾವಣಗೆರೆಯಿದೆ. ನಾನೇ ಅದನ್ನೆಲ್ಲಾ ಕಣ್ಣಲ್ಲಿ ನೋಡಿದ್ದೇನೆ. ಕುಡಿಯುವ ನೀರು, ಬಡವರಿಗೆ ಮನೆ ನೀಡಿದ್ದಾರೆ. ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಕಳೆದ 40 ವರ್ಷಗಳಿಂದ ಸೇವೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಶಾಮನೂರು ಅವರ ಕುಟುಂಬ ಮೊದಲಿನಿಂದಲೂ ನಿಂತಿದೆ. ಶಿವಶಂಕರಪ್ಪ ಅವರು ನನ್ನ ನಂತರ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ಆ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎನ್ನುವ ಅಸಮಾಧಾನದ ಬಗ್ಗೆ ಕೇಳಿದಾಗ, ಅಸಮಾಧಾನ ನಿಮ್ಮ ಬಳಿ ಹೇಳಿರಬಹುದು. ನಮ್ಮ ಬಳಿ ಹೇಳಿಲ್ಲ. ಅದಕ್ಕೆ ನಾವು ಮೂರು ಬಾರಿ ಜಬ್ಬಾರ್ ಅವರನ್ನು ಎಂಎಲ್ಸಿ ಮಾಡಿರುವುದು. ಜಬ್ಬಾರ್ ಅವರನ್ನು ಇದೇ ಶಿವಶಂಕರಪ್ಪ ಅವರು ಎಸ್.ಎಂ ಕೃಷ್ಣ ಅವರ ಕಾಲ, ಸಿದ್ದರಾಮಯ್ಯ ಅವರ ಕಾಲದಲ್ಲೂ ಎಂಎಲ್ಸಿ ಮಾಡಿದ್ದಾರೆ. ಆಗಾಗ್ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿರುತ್ತದೆ. ಪರಿಷತ್ ಸ್ಥಾನವನ್ನು ಮಾನೆ ಅವರ ಬದಲಿಗೆ ಧಾರವಾಡದಿಂದ ಸಲೀಂ ಅವರಿಗೆ ನೀಡಿದೆವು. ಬೋಸರಾಜು ಅವರಿಗೆ ನೀಡಬೇಕಿತ್ತು. ಅದನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಲಿಲ್ಲವೇ? ಕೆಲವು ಸಂದರ್ಭಗಳಲ್ಲಿ ಈ ರೀತಿ ಮಾಡಬೇಕಾಗುತ್ತದೆ ಎಂದರು.
ಸರ್ಕಾರಕ್ಕೆ 3 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಈ ಉಪಚುನಾವಣೆ ಭವಿಷ್ಯದ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಪ್ರತಿಪಕ್ಷಗಳು ಯಾವ ಚುನಾವಣೆ ಗೆದ್ದಿವೆ. ಅವರ ಸ್ಥಾನಗಳನ್ನು ನಾವು ಗೆದ್ದುಕೊಂಡು ಬಂದಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ಸ್ಥಾನ, ಕುಮಾರಸ್ವಾಮಿ ಅವರ ಮಗನ ಸ್ಥಾನ ಗೆದ್ದಿದ್ದೇವಲ್ಲ ಅಂತ ತಿಳಿಸಿದರು.


