– ಜಿಲ್ಲಾ ಆಸ್ಪತ್ರೆಯಲ್ಲಿ ಶಿಕ್ಷಕಿ ರಂಜನಿಗೆ ಚಿಕಿತ್ಸೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ. ದಿನಕ್ಕೊಂದು ಸಮಸ್ಯೆ ಎಂಬಂತೆ ಸಮೀಕ್ಷೆ ಮಾಡುವ ಶಿಕ್ಷಕರಿಗೆ (Teachers) ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಅದ್ರಲ್ಲೂ ಚಿಕ್ಕಬಳ್ಳಾಪುರದಲ್ಲಿ ಗಣತಿಗೆ ತೆರಳಿದ್ದ ಶಿಕ್ಷಕಿಯೊಬ್ಬರ ಮೇಲೆ ಸಾಕು ನಾಯಿ ದಾಳಿ ನಡೆಸಿದ್ದು, ಗಣತಿಗೆ ತೆರಳಿದ್ದ ಇತರ ಶಿಕ್ಷಕರಿಗೆ ನಾಯಿಗಳ ಭಯ ಕಾಡುತ್ತಿದೆ.
ಹೌದು. ರಾಜ್ಯ ಸರ್ಕಾರದ (Government OF Karnataka) ವತಿಯಿಂದ ನಡೆಯುತ್ತಿರುವ ಸಾಮಾಜಿಕ-ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಸಮೀಕ್ಷೆ ಆರಂಭವಾಗಿ 5-6 ದಿನಗಳಾದರೂ ಆ್ಯಪ್ ಸಮಸ್ಯೆ, ಸರ್ವರ್ ಸಮಸ್ಯೆ, ಯುಎಚ್‍ಐಡಿ ತೊಂದರೆ, ಲೊಕೆಷನ್ ಪತ್ತೆಯಾಗದೇ ಪರದಾಟ, ನೆಟ್ವರ್ಕ್ ಸಮಸ್ಯೆ ಹೀಗೆ ಅನೇಕ ಅಡಚಣೆಗಳು ಎದುರಾಗಿವೆ. ಇದರ ಜೊತೆಗೆ ಇದೀಗ ಶಿಕ್ಷಕರಿಗೆ ನಾಯಿಗಳ ಕಾಟವೂ ಶುರುವಾಗಿದೆ. ಚಿಕ್ಕಬಳ್ಳಾಪುರದಲ್ಲಿ (Chikkaballapura) ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ರಂಜನಿಗೆ ನಾಯಿ ಕಚ್ಚಿದೆ. ಕೂತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಂಜನಿ, ಚಿಕ್ಕಬಳ್ಳಾಪುರ ನಗರದ ತಿಮ್ಮಕ್ಕ ಬಡಾವಣೆಯಲ್ಲಿ ಸಮೀಕ್ಷೆ ನಡೆಸುತ್ತಿದ್ದರು. ಪಿಡಿಒ ನಾರಾಯಣಸ್ವಾಮಿ ಅವರ ಮನೆಯಲ್ಲಿ ಸಮೀಕ್ಷೆ ಮುಗಿಸಿ ಹೊರಬರುವಷ್ಟರಲ್ಲಿ ಮನೆಯಲ್ಲಿದ್ದ ಜರ್ಮನ್ ಶೆಫರ್ಡ್ ನಾಯಿ (German Shepherd Dog) ಹಿಂಬದಿಯಿಂದ ಹಠಾತ್ ದಾಳಿ ಮಾಡಿದೆ.
ನಾಯಿ ದಾಳಿಯಿಂದ ಶಿಕ್ಷಕಿಯ ತೊಡೆಯ ಭಾಗದಲ್ಲಿ ಗಾಯವಾಗಿದೆ. ಅದೃಷ್ಟವಶಾತ್ ತಕ್ಷಣ ಎಚ್ಚರಿಕೆ ವಹಿಸಿ ಬಚಾವ್ ಆದ್ದರಿಂದ ಸಣ್ಣ ಮಟ್ಟದ ಗಾಯ ಮಾತ್ರವಾಗಿದೆ. ತಕ್ಷಣ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ರಂಜನಿ ಅವರಿಗೆ ವೈದ್ಯರು ಪ್ರತಿ ದಿನ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನೂ ನಮಗೆ ಪರಿಚಯವಿಲ್ಲದ, ಗೊತ್ತಿಲ್ಲದ ಪ್ರದೇಶಗಳಿಗೆ ಸಮೀಕ್ಷೆಗೆ ನಿಯೋಜನೆ ಮಾಡಿರುವುದರಿಂದ, ಯಾವ ಮನೆಯಲ್ಲಿ ನಾಯಿ ಇದೆಯೋ ಇಲ್ಲವೋ ಎಂಬ ಭಯದಲ್ಲೇ ಮನೆ ಮನೆಗೆ ತೆರಳಬೇಕಾಗಿದೆ ಅಂತ ಶಿಕ್ಷಕರು ಅಳಲು ತೋಡಿಕೊಂಡರು. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್
ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಸ್ವತಃ ಸಭೆ ನಡೆಸಿ, ಸಮೀಕ್ಷೆಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ, ಯಾವುದೇ ಪೂರ್ಣ ತಯಾರಿಗಳು ಇಲ್ಲದೆ, ಶಿಕ್ಷಕರಿಗೆ ಸಮರ್ಪಕ ತರಬೇತಿ ನೀಡದೆ ಕಾರ್ಯ ಆರಂಭಿಸಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ. ಇದೀಗ ನಾಯಿಗಳ ದಾಳಿಯ ಭಯ ಶಿಕ್ಷಕರನ್ನು ಇನ್ನಷ್ಟು ಸಂಕಟಕ್ಕೊಳಪಡಿಸಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!