CET 2026 – ಕೆಇಎಯಿಂದ ವಸ್ತ್ರಸಂಹಿತೆ ಜಾರಿ, ಉಲ್ಲಂಘಿಸಿದರೆ ಕಠಿಣ ಕ್ರಮ

3 Min Read

-ಏ.22 ಕನ್ನಡ ಸೇರಿದಂತೆ, ಏ.23 ಮತ್ತು 24ರಂದು ನಡೆಯಲಿರುವ ಪರೀಕ್ಷೆ

ಬೆಂಗಳೂರು: 2026ರ ಸಿಇಟಿ ಪರೀಕ್ಷೆಗೆ (CET Exam) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಸ್ತ್ರಸಂಹಿತೆ ಜಾರಿ ಮಾಡಿದೆ.

ಏ.22 ಕನ್ನಡ ಸೇರಿದಂತೆ ಏ.23 ಮತ್ತು 24ರಂದು ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯಲು 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸದ್ಯ ಕೆಇಎ ಪರೀಕ್ಷೆಗೆ ವಸ್ತ್ರಸಂಹಿತೆ ಬಿಡುಗಡೆ ಮಾಡಿದ್ದು, ಕಡ್ಡಾಯವಾಗಿ ವಸ್ತ್ರಸಂಹಿತೆ ಪಾಲನೆಗೆ ಸೂಚನೆ ನೀಡಿದೆ. ಇನ್ನೂ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಪತ್ತೆ ಹಚ್ಚಲು ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಮೇ 10 ಕೊನೆಯ ದಿನ: KEA

ಪುರುಷ ಅಭ್ಯರ್ಥಿಗಳ ವಸ್ತ್ರಸಂಹಿತೆ:

  • ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು
  • ಸಾದ್ಯವಾದಷ್ಟು ಕಾಲರ್‌ರಹಿತ ಸಾಧಾರಣ ಶರ್ಟ್/ಟಿ-ಶರ್ಟ್ ಧರಿಸಲು ಆದ್ಯತೆ ನೀಡುವುದು.
  • ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ/ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ.
  • ಕುರ್ತಾ ಪೈಜಾಮವನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ.
  • ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ (ZIP) ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು.
  • ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು.
  • ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳ ವಸ್ತ್ರಸಂಹಿತೆ

  • ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಜ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ.
  • ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಮತ್ತು ಮೇಲೆ ಉಲ್ಲೇಖಿಸಿರುವ ಬಗೆಯಲ್ಲಿ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.
  • ಎತ್ತರವಾದ ಹಿಮ್ಮಡಿಯ ಶೂಗಳನ್ನು/ ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.
  • ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ).

ನಿಷೇಧಿತ ವಸ್ತುಗಳ ಪಟ್ಟಿ

  • ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂ ಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ.
  • ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗು ತಿನ್ನುವುದನ್ನು ನಿಷೇಧಿಸಲಾಗಿದೆ.
  • ಬಣ್ಣದ ಹಾಗೂ ಲೋಹದ ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ಇರುವುದಿಲ್ಲ.
  • ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.
  • ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್‌ಗಳು ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ.
  • ತಲೆಯ ಮೇಲೆ ಟೋಪಿ/ ಹ್ಯಾಟ್ ಧರಿಸುವಂತಿಲ್ಲ.
  • ಯಾವುದೇ ರೀತಿಯ ಮುಖ ಮುಚ್ಚುವಂತ ಮಾಸ್ಕನ್ನು ಧರಿಸುವಂತಿಲ್ಲ.

ಪರೀಕ್ಷೆಯ ದಿನದಂದು ಈ ಕೆಳಗಿನ ವಸ್ತುಗಳನ್ನು ಮಾತ್ರ ತರಲು ಅನುಮತಿಸಲಾಗಿದೆ:

  • ಪ್ರವೇಶ ಪತ್ರವನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ತರುವುದು.
  • ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ತರುವುದು ಕಡ್ಡಾಯಗೊಳಿಸಲಾಗಿದೆ.
  • ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
  • ಮೇಲೆ ನಿಗದಿಪಡಿಸಲಾದ ವಸ್ತ್ರಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು. ಇಲ್ಲವಾದಲ್ಲಿ ನಿಯಮಾನುಸಾರ ಅಭ್ಯರ್ಥಿಗಳ ಮೇಲೆ ಕಠಿಣ ಕ್ರಮವನ್ನು ಜರುಗಿಸಲಾಗುವುದು.

Share This Article