ಠುಸ್ಸಾದ ಪಟಾಕಿ ಕೈಯಲ್ಲಿ ಹಿಡಿದು ಮುಂಗೈ ಛಿದ್ರ- ಈ ಯುವಕನಿಗೆ ಬೇಕಿದೆ ನೌಕರಿ

Public TV
1 Min Read
MYS 01

ಮೈಸೂರು: ರುಸ್ಸಾದ ಪಟಾಕಿಯನ್ನು ಕೈಯ್ಯಲ್ಲಿ ಹಿಡಿದ ಪರಿಣಾಮ ಯುವಕನ ಮುಂಗೈ ಛಿದ್ರವಾಗಿದ್ದು, ಅವತ್ತಿನಿಂದ ಆತ ಎರಡು ಮುಂಗೈ ಇಲ್ಲದೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾನೆ.

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನಿವಾಸಿಯಾಗಿರುವ ಎ.ಎಸ್. ಅಭಿಷೇಕ್ 7 ವರ್ಷಗಳ ಹಿಂದೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಕಾರ್ತಿಕೋತ್ಸವದ ಸಂದರ್ಭದಲ್ಲಿ ಪಟಾಕಿ ಬಾಂಬ್ ಸಿಡಿಸುವ ವೇಳೆ ಬಾಂಬ್ ಸಿಡಿಯದೆ ಠುಸ್ಸಾಗಿತ್ತು.

ಸಿಡಿಯದೇ ಠುಸ್ಸಾದ ಪಟಾಕಿ ಬಾಂಬನ್ನು ಕೂತುಹಲದಿಂದ ಅಭಿಷೇಕ್ ಕೈಯಲ್ಲಿ ತೆಗೆದುಕೊಂಡಿದ್ದಾನೆ. ಆಗ ಆ ಪಟಾಕಿ ಬಾಂಬ್ ಸಿಡಿದಿದೆ. ಸಿಡಿದ ರಭಸಕ್ಕೆ ಅಭಿಷೇಕ್‍ನ ಎರಡು ಮುಂಗೈ ಛಿದ್ರಗೊಂಡಿವೆ. ತಕ್ಷಣ ಆಸ್ಪತ್ರೆಗೆ ಹೋದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ.

ಘಟನೆ ನಡೆದ ವರ್ಷದಲ್ಲಿ ಅಭಿಷೇಕ್ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ. ಮುಂಗೈ ಇಲ್ಲದ ಕಾರಣ ಇನ್ನೊಬ್ಬರ ನೆರವಿನಿಂದ ಪರೀಕ್ಷೆ ಕೂಡ ಬರೆದು ಉತ್ತೀರ್ಣನಾಗಿದ್ದಾನೆ. ಆದರೆ ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಿಲ್ಲ. ಆತನ ತಾಯಿ ಅಶಾ ದೇವಸ್ಥಾನ ಬಳಿ ಹೂ ಕಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. ಅಭಿಷೇಕ್‍ಗೆ ತಂದೆ ಕೂಡ ಇಲ್ಲ.

ಮನೆಗೆ ಆಧಾರ ಸ್ಥಂಭವಾಗಬೇಕಿದ್ದ ಅಭಿಷೇಕ್, ಮುಂಗೈ ಕಳೆದುಕೊಂಡು ಕಂಗಾಲಾಗಿದ್ದಾನೆ. ಕಂಪ್ಯೂಟರ್ ಜ್ಞಾನ ಹೊಂದಿರೋ ಅಭಿಷೇಕ್ ಬುದ್ಧಿವಂತ ಕೂಡ ಇದ್ದಾನೆ. ಮುಂಗೈ ಕಳೆದುಕೊಂಡರೂ ತನ್ನ ಎಲ್ಲಾ ಕೆಲಸವನ್ನು ತಾನೇ ಆತ್ಮವಿಶ್ವಾಸದಿಂದ ಮಾಡಿಕೊಂಡು ಹೋಗುತ್ತಿದ್ದಾನೆ.

ಅಭಿಷೇಕ್‍ಗೆ ಒಂದು ಸೂಕ್ತ ಕೆಲಸದ ಅವಶ್ಯಕತೆ ಇದೆ. ಅದರಲ್ಲೂ ಕಂಪ್ಯೂಟರ್ ಕ್ಲಾಸ್‍ಗಳಲ್ಲಿ, ಅಥವಾ ಮ್ಯಾನೇಜ್‍ಮೆಂಟ್ ಕಚೇರಿಗಳಲ್ಲಿ ಕೆಲಸ ಸಿಕ್ಕರೆ ಉತ್ತಮ ಅಂತಿದ್ದಾನೆ. ಜೊತೆಗೆ ಈ ಕುಟುಂಬಕ್ಕೆ ಸ್ವಲ್ಪ ಅರ್ಥಿಕ ನೆರವು ಕೂಡ ಬೇಕಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲೇ ಕೆಲಸ ಕೊಡುವ ಪ್ರಸ್ತಾಪ ಇದ್ದು ಸದ್ಯಕ್ಕೆ ಅದು ನೆನೆಗುದಿಗೆ ಬಿದ್ದಿಗೆ. ಸರ್ಕಾರ ಮನಸ್ಸು ಮಾಡಿದರೆ ಈ ಕೆಲಸ ಕೊಡಬಹುದಾಗಿದ್ದು, ಅಭಿಷೇಕ್ ಸಹಾಯದ ನಿರೀಕ್ಷೆಯಲ್ಲಿದ್ದಾನೆ.

MYS 02

Share This Article