ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

2 Min Read

– ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ್ದಕ್ಕೆ ಸೂರ್ಯ ವಿರುದ್ಧ ಪಿಸಿಬಿ ಕಂಪ್ಲೆಂಟ್‌

ದುಬೈ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ (Ind vs Pak) ಮುಖಾಮುಖಿಯಾಗಿರುವ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್‌ ನಡುವಿನ ಮೊದಲ ಸೂಪರ್‌ ಫೋರ್‌ ಪಂದ್ಯ ಕೂಡ ಸ್ಲೆಡ್ಜಿಂಗ್‌ಗೆ (ಕೆಣಕುವುದು) ವೇದಿಕೆಯಾಗಿತ್ತು.

ಸೂಪರ್‌-4 ಪಂದ್ಯದ ವೇಳೆ ದುವರ್ತನೆ ತೋರಿದ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ (Haris Rauf) ಮತ್ತು ಸಾಹಿಬ್‌ಝಾದಾ ಫರ್ಹಾನ್ (Sahibzada Farhan) ವಿರುದ್ಧ ಐಸಿಸಿಗೆ ಬಿಸಿಸಿಐ (BCCI) ದೂರು ನೀಡಿದೆ. ಐಸಿಸಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಾಹಿಬ್‌ಝಾದಾ ಫರ್ಹಾನ್ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದ್ರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

Abhishek Sharma 3

ವಿವಾದ ಆಗಿದ್ದೇನು?
ಸೂಪರ್‌-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್‌ ಸೆಲಬ್ರೇಷನ್‌ ಮಾಡಿದ್ದರು. ರೈಫಲ್‌ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್‌ ಮಾಡಿದ್ದರು. ಇನ್ನೂ ಫೀಲ್ಡಿಂಗ್‌ ವೇಳೆ ಹ್ಯಾರಿಸ್‌ ರೌಫ್‌ಗೆ ಕೊಹ್ಲಿ ಅಭಿಮಾನಿಗಳು ಕಾಡಿಸಿದರು. 2022ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ಗೆ ಬಾರಿಸಿದ್ದ ಸಿಕ್ಸ್‌ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕ್ಲೊಹ್ಲಿ ಅಂತ ಕೂಗುತ್ತಿದ್ದರು. ಈ ವೇಳೆ ರೌಫ್‌ ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ರೌಫ್ ಮತ್ತು ಫರ್ಹಾನ್‌ ಇಬ್ಬರೂ ಐಸಿಸಿ ವಿಚಾರಣೆಯಲ್ಲಿ ತಮ್ಮ ಸನ್ನೆಗಳನ್ನು ವಿವರಿಸಬೇಕಾಗುತ್ತದೆ. ಒಂದು ವೇಳೆ ಅವರು ಮನವೊಲಿಸಲು ಸಾಧ್ಯವಾಗದಿದ್ದರೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕಾರ ನಿರ್ಬಂಧ ಎದುರಿಸಬೇಕಾಗುತ್ತೆ ಎಂದು ತಿಳಿದುಬಂದಿದೆ.

ಸೂರ್ಯ ವಿರುದ್ಧ ದೂರು
ಇನ್ನೂ ಲೀಗ್‌ ಸುತ್ತಿನಲ್ಲಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav), ಪಂದ್ಯದ ಗೆಲುವುನ್ನು ಪಹಲ್ಗಾಮ್‌ ದಾಳಿಯ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರಪಡೆಗಳಿಗೆ ಅರ್ಪಿಸಿದ್ದರು. ಇದಕ್ಕಾಗಿ ಸೂರ್ಯಕುಮಾರ್‌ ಯಾದವ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಐಸಿಸಿಗೆ ದೂರು ನೀಡಿದೆ.

ಸೂರ್ಯಕುಮಾರ್‌ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಕ್ರೀಡಾ ಪ್ರತಿಷ್ಠೆಗೆ ಹಾನಿಯಾಗಿದೆ. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಸೂರ್ಯ ಈ ಆರೋಪಗಳನ್ನು ನಿರಾಕರಿಸಿದ್ರೆ, ಅಧಿಕೃತ ವಿಚಾರಣೆಗೆ ಐಸಿಸಿ ಮುಂದೆ ಹಾಜರಾಗಬೇಕಾಗುತ್ತೆ ಎಂದು ತಿಳಿದುಬಂದಿದೆ.

Share This Article