ಮತಾಂತರ ನಿಷೇಧ ಕಾಯ್ದೆ ಜಾರಿ RSS ಅಜೆಂಡಾ: ಸಿದ್ದರಾಮಯ್ಯ

Public TV
3 Min Read

ಬೆಳಗಾವಿ: ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನ ವಿರೋಧಿ ಕಾನೂನು. ಇದು ಆರ್‌ಎಸ್‌ಎಸ್‌ನವರ ಅಜೆಂಡಾ. ಈ ಸರ್ಕಾರ ಸಾಧನೆ ಎಂದು ಹೇಳಿಕೊಳ್ಳಲು ಯಾವ ಕೆಲಸಗಳನ್ನು ಮಾಡಿಯೇ ಇಲ್ಲ, ಹಾಗಾಗಿ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಿ ಎಂದು ಆರ್‌ಎಸ್‌ಎಸ್‌ನವರೇ ಸರ್ಕಾರಕ್ಕೆ ಹೇಳಿರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ ಬಳಿಕ ಸಭಾತ್ಯಾಗ ಮಾಡಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಪರಿಷತ್ ಚುನಾವಣೆಯ ಫಲಿತಾಂಶ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಲು ಕಾರಣ. ನಮಗೆ 45% ಮತ ಬಿದ್ದಿದೆ, ಬಿಜೆಪಿಗೆ 41% ಮತ ಬಿದ್ದಿದೆ. ಹೋದ ಮಾನ ಉಳಿಸಿಕೊಳ್ಳಲು ಸರ್ಕಾರ ಸಂವಿಧಾನ ಬಾಹಿರ ಕಾನೂನು ಜಾರಿ ಮಾಡಲು ಹೊರಟಿದೆ. ಭಾರತದ ಸಂವಿಧಾನದ ಆಧಾರದ ಮೇಲೆ ಸರ್ಕಾರ ನಡೆಸಬೇಕು, ಪಾಕಿಸ್ತಾನದ ಸಂವಿಧಾನ ನೋಡಿಕೊಂಡಲ್ಲ. ಈಶ್ವರಪ್ಪ ಅವರಿಗೆ ನಮ್ಮ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಯನ್ನು ಹರಿದು ಹಾಕಿದ್ದೇನೆ, ಇದು ನನ್ನ ಹಕ್ಕು: ಡಿಕೆಶಿ

ಕದ್ದು ಮುಚ್ಚಿ ಮಸೂದೆ ಮಂಡನೆ: ಕಲಾಪದ ಇಂದಿನ ಅಜೆಂಡಾದಲ್ಲಿ ಮತಾಂತರ ನಿಷೇಧ ಕಾಯ್ದೆಯ ಪ್ರಸ್ತಾಪ ಇರಲಿಲ್ಲ. ಇಂದು ಮಧ್ಯಾಹ್ನ ಊಟದ ವಿರಾಮಕ್ಕೆ ತೆರಳುವ ಮೊದಲು ಆರ್.ಅಶೋಕ್ ಅವರು ನೆರೆ, ಅತಿವೃಷ್ಟಿ ಪರಿಹಾರ ಕಾರ್ಯದ ಉತ್ತರ ನೀಡಲು ಆರಂಭ ಮಾಡಿದ್ದರು. ಉತ್ತರ ಮುಗಿದ ಮೇಲೆ ಬೇರೆ ವಿಷಯ ಕೈಗೆತ್ತಿಕೊಳ್ಳುವುದು ನಿಯಮ. ಆದರೆ ಸರ್ಕಾರ ಹೆಚ್ಚುವರಿ ಅಜೆಂಡಾವನ್ನು ಸೇರಿಸಿ ಇದ್ದಕ್ಕಿದ್ದಂತೆ ಮತಾಂತರ ನಿಷೇಧ ಕಾಯಿದೆಯನ್ನು ಪ್ರಸ್ತಾಪ ಮಾಡಿ, ಸದನದ ಮತಕ್ಕೆ ಹಾಕಿತು. ಸರ್ಕಾರ ಸಭಾಧ್ಯಕ್ಷರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕದ್ದು ಮುಚ್ಚಿ ಮಸೂದೆಯನ್ನು ಮಂಡಿಸಿದೆ. ಈ ಮಸೂದೆ ಮಂಡನೆಗೆ ಅಂತಹಾ ತುರ್ತು ಏನಿತ್ತು? ನಾಳೆ ಅಥವಾ ನಾಡಿದ್ದು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಸರ್ಕಾರದ ಬಳಿ ಸಮಯವಿತ್ತು. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಈ ಕಾನೂನು ಜಾರಿ ಮಾಡಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಗುಜರಾತ್ ನ್ಯಾಯಾಲಯ ಮತಾಂತರ ನಿಷೇಧ ಕಾನೂನಿಗೆ ತಡೆಯಾಜ್ಞೆ ನೀಡಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಕಾಯ್ದೆ ಜಾರಿಯನ್ನು ತಡೆಹಿಡಿಯಲಾಗಿದೆ ಎಂದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

ಅವರವರ ಹಕ್ಕು: ಸಂವಿಧಾನದ 25ನೇ ಆರ್ಟಿಕಲ್ ವ್ಯಕ್ತಿಗೆ ಯಾವುದೇ ಧರ್ಮವನ್ನು ಅನುಸರಿಸುವ, ಸ್ವೀಕರಿಸುವ, ಪ್ರಚಾರ ಮಾಡುವ ಹಕ್ಕು ನೀಡಿದೆ. ಮಹಿಳೆ ಅಥವಾ ಪುರುಷನ ಸಂಗಾತಿ ಆಯ್ಕೆಯ ಹಕ್ಕನ್ನು ಈ ಕಾಯ್ದೆ ಕಸಿಯಲು ಹೊರಟಿದೆ. ಯಾರು ಯಾರನ್ನು ಮದುವೆಯಾಗಬೇಕು ಎಂದು ಸರ್ಕಾರ ನಿರ್ಧಾರ ಮಾಡಲು ಬರುತ್ತಾ? ಈ ಕಾನೂನು ಸಂವಿಧಾನ ಬಾಹಿರವಾಗಿದೆ ಎಂದು ಹೇಳಲು ನಮಗೆ ಅವಕಾಶವನ್ನೇ ನೀಡಿಲ್ಲ. ಕದ್ದು ಮುಚ್ಚಿ ಕಾಯಿದೆ ಜಾರಿ ಮಾಡುವ ಅಗತ್ಯವೇನಿದೆ? ಆರ್.ಅಶೋಕ್ ಅವರು ಅತಿವೃಷ್ಟಿ, ಪ್ರವಾಹ ಪರಿಹಾರ ಕಾರ್ಯದ ಬಗ್ಗೆ ಉತ್ತರ ನೀಡುತ್ತಿದ್ದಾರೆ. ಸಂವಿಧಾನ ಬಾಹಿರವಾಗಿರುವ ಸರ್ಕಾರ ನೀಡುವ ಉತ್ತರ ನಾವು ಕೇಳಲು ಸಿದ್ಧರಿಲ್ಲ. ಹೀಗಾಗಿ ಸಭಾತ್ಯಾಗ ಮಾಡಿದ್ದೇವೆ. ನಾಳೆ ನಡೆಯುವ ಕಲಾಪದ ಚರ್ಚೆಯಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ!: ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಕೊರೊನಾದಿಂದ ಸತ್ತವರಿಗೆ ಪರಿಹಾರ ನೀಡಿಲ್ಲ, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕೊಟ್ಟಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಅಂಗನವಾಡಿ, ಶಾಲೆ, ರಸ್ತೆ, ಸೇತುವೆಗಳು ಬಿದ್ದು ಹೋಗಿವೆ. ಅದನ್ನು ಸರಿ ಮಾಡಿಲ್ಲ. ಅವೆಲ್ಲಾ ಬಿಟ್ಟು ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಮತಾಂತರ ನಿಷೇಧ ಕಾಯಿದೆಗೆ ಕದ್ದುಮುಚ್ಚಿ ಅನುಮೋದನೆ ಪಡೆಯಲು ಹೊರಟಿದ್ದಾರೆ. ಒಟ್ಟಿನಲ್ಲಿ ಜನರ ಗಮನ ಬೇರೆ ಕಡೆ ಸೆಳೆಯುವುದೇ ಕಾಯಿದೆಯ ಉದ್ದೇಶ. ನಾಳೆ ನಡೆಯುವ ಚರ್ಚೆಯಲ್ಲಿ ಭಾಗವಹಿಸಿ, ತೀವ್ರವಾಗಿ ವಿರೋಧ ಮಾಡುತ್ತೇವೆ. ಸದನದಲ್ಲಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ. ಸದನವನ್ನು ಶುಕ್ರವಾರವೇ ಮುಗಿಸಬೇಕು ಎಂಬ ನಿಯಮವಿದೆಯೇ? ಇನ್ನೂ ಒಂದು ವಾರ ವಿಸ್ತರಿಸಲು ಅವಕಾಶ ಇಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *