– ಜೀವ ಬಿಗಿಹಿಡಿದು ಕುಳಿತಿದ್ದ ಪ್ರಯಾಣಿಕರು
ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನದಲ್ಲಿ (Fly91 Flight) ಮತ್ತೆ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡ ಪರಿಣಾಮ, 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಹಾರಾಡಿದ ಘಟನೆ ನಡೆದಿದೆ. 5 ದಿನಗಳ ಅಂತರದಲ್ಲಿ ಇದು 2ನೇ ಘಟನೆಯಾಗಿದೆ.

ಮೊನ್ನೆಯಷ್ಟೇ ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ91 ವಿಮಾನವು ಹವಾಮಾನ ವೈಪರಿತ್ಯದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಇಳಿಯಲು (Landing) ಸಾಧ್ಯವಾಗದೇ ಮೂರು ಗಂಟೆಗೂ ಹೆಚ್ಚು ಕಾಲ ಹಾರಾಡಿತ್ತು. ಇದೀಗ ಬೆಂಗಳೂರಿನಿಂದ ಬಂದ ವಿಮಾನದಲ್ಲೂ ಅದೇ ರೀತಿಯ ಸಮಸ್ಯೆ ಕಾಣಿಡಿಕೊಂಡಿದೆ.



IC3412 ಸಂಖ್ಯೆಯ ವಿಮಾನವು ನಿನ್ನೆ (ಮಂಗಳವಾರ) ಸಂಜೆ 6 ಗಂಟೆಗೆ ಬೆಂಗಳೂರಿನಿಂದ (Bengaluru) ಹೊರಟಿತ್ತು. 6:50 ರ ವೇಳೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ವಿಮಾನ ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿ ತಲುಪಿದ್ರೂ, ಲ್ಯಾಂಡಿಂಗ್ ವೇಳೆ ಸಮಸ್ಯೆ ಉಂಟಾಗಿದೆ. ಇದರಿಂದ ಪ್ರಯಾಣಿಕರನ್ನ ಹೊತ್ತ ವಿಮಾನ ಸುಮಾರು 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ರಾತ್ರಿ 9:15 ಗಂಟೆಗೆ ವಿಮಾನ ಲ್ಯಾಂಡ್ ಆಗಿದೆ.

ಫ್ಲೈ91ಗೆ ಈ ಸಮಸ್ಯೆ ಏಕೆ?
ಈ ಘಟನೆ ಬಳಿಕ ಬೇರೆ ಯಾವುದೇ ಸಂಸ್ಥೆಯ ವಿಮಾನಗಳಿಗೆ ಇಲ್ಲದ ಸಮಸ್ಯೆ ಫ್ಲೈ91 ವಿಮಾನಗಳಿಗೆ ಏಕೆ ಆಗುತ್ತಿದೆ ಅನ್ನೋ ಪ್ರಶ್ನೆ ಎದ್ದಿದೆ. ಹೈದರಾಬಾದ್‌ನಿಂದ ಬಂದ ವಿಮಾನದಲ್ಲಿ ದೋಷ ಕಾಣಿಸಿಕೊಂಡಾಗ ಹವಾಮಾನ ವೈಪರಿತ್ಯದ ನೆಪ ಹೇಳಿತ್ತು. ಆದ್ರೆ ನಿನ್ನೆ ಫ್ಲೈ91 ವಿಮಾನ ಲ್ಯಾಂಡ್ ಆಗಬೇಕಿದ್ದ ಅದೇ ಸಮಯದಲ್ಲಿ ಹಲವಾರು ಫ್ಲೈಟ್‌ಗಳು ಟೇಕಾಫ್ ಆಗಿವೆ ಮತ್ತು ಲ್ಯಾಂಡಿಂಗ್ ಕೂಡ ಆಗಿವೆ. ಆದ್ರೆ ಫ್ಲೈ91 ವಿಮಾನಕ್ಕೆ ಮಾತ್ರ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿದ್ದು ಏಕೆ? ಅನ್ನೋ ಅನುಮಾನ ಮೂಡಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಜೀವ ಬಿಗಿಹಿಡಿದು ಕುಳಿತ ಪ್ರಯಾಣಿಕರು
ಮತ್ತೆ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ ಫ್ಲೈ91 ವಿಮಾನವು ಸುಮಾರು 2 ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಟ ನಡೆಸಿತ್ತು. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು, ಜೀವಭಯದಿಂದ ದೇವರ ಮೊರೆ ಹೋದರು. ಜೀವ ಬಿಗಿಹಿಡಿದು ಕುಳಿತಿದ್ದರು.

