– ಕೂದಲೆಳೆ ಅಂತರದಲ್ಲಿ ಹತ್ತಾರು ಜನ ಪಾರು
ಹಾಸನ: ಬೇಲೂರು (Beluru) ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತರೊಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು (Elephant) 6 ಸಾಕಾನೆಗಳ ಬಳಸಿ ಹಿಡಿಯಲಾಗಿತ್ತು. ಆದರೆ ಆನೆಗಳ ತಂಡಕ್ಕೆ ಪುಂಡಾನೆ ಚಳ್ಳೆಹಣ್ಣು ತಿನ್ನಿಸಿ ಕಾಡಿಗೆ ಪರಾರಿಯಾಗಿದೆ.
ಬೇಲೂರು ತಾಲೂಕಿನ ಕೆರಗೋಡು ಗ್ರಾಮದ ಕಾಫಿ ತೋಟದಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುವಾಗ ದೈತ್ಯಾಕಾರದ ಒಂಟಿ ಸಲಗ ಪತ್ತೆಯಾಗಿತ್ತು. ಬಳಿಕ ಅರವಳಿಕೆ ಚುಚ್ಚುಮದ್ದು ನೀಡಿ ಅದು ಕುಸಿದು ಬಿದ್ದ ನಂತರ ಸೆರೆ ಹಿಡಿಯಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸುಗ್ರೀವ, ಧನಂಜಯ, ಅಯ್ಯಪ್ಪ, ಏಕಲವ್ಯ, ಶ್ರೀರಾಮ ಸೇರಿ ಆರು ಆನೆಗಳು ಭಾಗಿಯಾಗಿದ್ದವು. ಇದನ್ನೂ ಓದಿ: ನಿಂತಿದ್ದ ಆಟೋ ಜಖಂಗೊಳಿಸಿ ಓಡಿಹೋದ ಪುಂಡಾನೆ – ಮೊಬೈಲ್ನಲ್ಲಿ ವೀಡಿಯೋ ಸೆರೆ
ಬಳಿಕ ಕಾಡಾನೆ ಎಚ್ಚರವಾದಾಗ ಕಾಲಿಗೆ ಹಾಗೂ ಕತ್ತಿಗೆ ಕಟ್ಟಿದ್ದ ಹಗ್ಗವನ್ನು ಕಿತ್ತೆಸೆದು ತಪ್ಪಿಸಿಕೊಂಡು ಅಡ್ಡಾದಿಡ್ಡಿಯಾಗಿ ಓಡಿ ಹೋಗಿದೆ. ಕಾಡಾನೆ ದಿಕ್ಕಾಪಾಲಾಗಿ ಓಡಿದ್ದರಿಂದ ಅಲ್ಲೇ ಸಮೀಪದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕಕ್ಕೀಡಾದರು. ಅಲ್ಲದೇ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾಡಾನೆ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ, ಆನೆಗಳ ತಂಡವನ್ನು ಕ್ಯಾಂಪ್ಗೆ ವಾಪಸ್ ಕರೆತರಲಾಗಿದೆ.
ಏಪ್ರಿಲ್ 12 ರಂದು ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತ ರಾಜಶೆಟ್ಟಿ ಎಂಬವರನ್ನು ಈ ಕಾಡಾನೆ ಬಲಿ ಪಡೆದಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ (Forest Department) ಆಗ್ರಹಿಸಿದ್ದರು. ಇದನ್ನೂ ಓದಿ: ಪೊನ್ನಂಪೇಟೆಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

