– ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಾಂಸಾಹಾರ ನಿಷೇಧಿಸುತ್ತೆ ಎಂದಿದ್ದ ಟಿಎಂಸಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಅಭೂತಪೂರ್ವ ಗೆಲುವು ದಾಖಲಿಸಿದ ಹಿನ್ನೆಲೆ ಬಿಜೆಪಿ (BJP) ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಕಾರ್ಯಕರ್ತರು ಮೀನೂಟ ಬಡಿಸಿ ಖುಷಿ ಹಂಚಿಕೊಂಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಂಸಾಹಾರ ನಿಷೇಧಿಸುತ್ತದೆ ಎಂದು ಟಿಎಂಸಿ ಪ್ರಚಾರ ಮಾಡಿತ್ತು. ಮೊಟ್ಟೆ, ಮೀನು, ಮಾಂಸ ತಿನ್ನಲು ಬಿಡಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ ಮಾಡಿದ್ದರು.
ಟಿಎಂಸಿಗೆ ಕೌಂಟರ್ ಕೊಡಲು ಬಿಜೆಪಿ ಕಚೇರಿಯಲ್ಲಿ ಮೀನೂಟ ಬಡಿಸಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ‘ಮಾಚ್’ ಅಂದ್ರೆ ಮೀನು, ‘ಭಾತ್’ ಅಂದ್ರೆ ಅನ್ನ. ಬಿಜೆಪಿ ಮಾಂಸಾಹಾರ ನಿಷೇಧಿಸುತ್ತದೆ ಅನ್ನೋದೆಲ್ಲ ಸುಳ್ಳು. ಇದು ಅಪಪ್ರಚಾರ ಎಂದು ಟಿಎಂಸಿಗೆ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಮತ ಎಣಿಕೆ ಕೇಂದ್ರದಲ್ಲಿ ಗಲಾಟೆ; ಕೂಚ್ ಬೆಹಾರ್ನಲ್ಲಿ ಹೊಡೆದಾಡಿಕೊಂಡ ಬಿಜೆಪಿ-ಟಿಎಂಸಿ ಕಾರ್ಯಕರ್ತರು
ದೇಶದ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಐತಿಹಾಸಿಕ ಜಯ ಗಳಿಸಿದೆ. ಮಮತಾ ಬ್ಯಾನರ್ಜಿ ಹಿಡಿತದಲ್ಲಿದ್ದ ರಾಜ್ಯವನ್ನು ಬಿಜೆಪಿ ಈಗ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಚುನಾವಣೆಯಲ್ಲಿ ಬಿಜೆಪಿ 198 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಟಿಎಂಸಿ 89 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಪಶ್ಚಿಮ ಬಂಗಾಳದ 294 ವಿಧಾನಸಭೆಗಳಿಗೆ ಏ.23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಒಟ್ಟು 2,926 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಹಂತದ ಚುನಾವಣೆಗೆ 152 ಸ್ಥಾನಗಳಲ್ಲಿ 1,487 ಹಾಗೂ ಎರಡನೇ ಹಂತದ ಚುನಾವಣೆಗೆ 142 ಕ್ಷೇತ್ರಗಳಲ್ಲಿ ಒಟ್ಟು 1,448 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 93.19% ಹಾಗೂ ಎರಡನೇ ಹಂತದಲ್ಲಿ 92.47% ಮತದಾನ ನಡೆಯಿತು. ಈ ರಾಜ್ಯ ಎಸ್ಐಆರ್ ಬಳಿಕ ಚುನಾವಣೆ ಎದುರಿಸಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸೀಟ್ಗಳ ಬಹುಮತ ಬೇಕಿತ್ತು. ಈ ಬಾರಿ 385 ಮಹಿಳೆಯರು ಸ್ಪರ್ಧಿಸಿದ್ದರು.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಪೈಪೋಟಿ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದ್ದವು. ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್ಪಿಎಫ್ ನಿಯೋಜಿಸಿತ್ತು. ಹೀಗಿದ್ದು, ಅಲ್ಲಲ್ಲಿ ಒಂದಷ್ಟು ಗೊಂದಲಗಳಾಗಿವೆ. ಚುನಾವಣೆ ಬಳಿಕವೂ ಬಂಗಾಳದ ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಿತು. ಫಾಲ್ಟಾ ಕ್ಷೇತ್ರದ ಎಲ್ಲ 285 ಮತಗಟ್ಟೆಗಳಲ್ಲಿ ಮೇ 21ಕ್ಕೆ ಮರು ಮತದಾನ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಟಿಎಂಸಿ 213, ಬಿಜೆಪಿ 77 ಸ್ಥಾನಗಳನ್ನು ಗೆದ್ದಿದ್ದವು. ಇದನ್ನೂ ಓದಿ: West Bengal: ಬಿಜೆಪಿಯಿಂದ ಕಣಕ್ಕಿಳಿದಿದ್ದ ಆರ್ಜಿ ಕಾರ್ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಮುನ್ನಡೆ
ಕಳೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC): 215 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಸಾಧಿಸಿತ್ತು. ಭಾರತೀಯ ಜನತಾ ಪಕ್ಷ (BJP): 77 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಇತರರು: ರಾಷ್ಟ್ರೀಯ ಸೆಕ್ಯುಲರ್ ಮಜ್ಲಿಸ್ ಪಾರ್ಟಿ (RSMP) 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದರು. ಕಾಂಗ್ರೆಸ್ ಮತ್ತು ಎಡರಂಗ: ಈ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

