Assembly Elections Results 2026 | ಪುದುಚೇರಿಯಲ್ಲಿ ಎನ್‌ಡಿಎಗೆ ಮತ್ತೆ ಅಧಿಕಾರ

1 Min Read

ಚೆನ್ನೈ: ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಪುದುಚೇರಿ, ವಿಧಾನಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌ ನೇತೃತ್ವದ ಎನ್‌ಡಿಎ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ 2ನೇ ಅವಧಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

30 ಸದಸ್ಯ ಬಲದ ವಿಧಾನಸಭೆಗೆ ಬಹುಮತಕ್ಕೆ 16 ಸ್ಥಾನಗಳನ್ನ ಗೆಲ್ಲಬೇಕಿತ್ತು. ಚುನಾವಣಾ ಆಯೋಗದ ವೆಬ್‌ಸೈಟ್‌ ಮಾಹಿತಿ ಪ್ರಕಾರ, ಎಐಎನ್‌ಆರ್‌ಸಿ ಎಲ್ಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಡಿಎಂಕೆ 5, ಬಿಜೆಪಿ 4, ರಾಷ್ಟ್ರೀಯ ಕಾಂಗ್ರೆಸ್‌, ಎಲ್‌ಜೆಕೆ, ಎಡಿಎಂಕೆ, ಎನ್‌ವೈಎಂಕೆ ತಲಾ ಒಂದೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಟಿವಿಕೆ ಸ್ಪರ್ಧೆ ಮಾಡಿದ್ದ 2 ಸ್ಥಾನಗಳಲ್ಲೂ ಗೆದ್ದು ಬೀಗಿದೆ. ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಮೂವರೂ ಗೆದ್ದಿದ್ದಾರೆ.

ತಚ್ಛಂಡವಾಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ಎನ್‌. ರಂಗಸ್ವಾಮಿ ಪ್ರಮುಖ ವಿಜೇತರಲ್ಲಿ ಒಬ್ಬರಾಗಿದ್ದು, 4,441 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಿರಿಯ ಕಾಂಗ್ರೆಸ್‌ ನಾಯಕರಲ್ಲಿ ವಿ. ವೈತಿಲಿಂಗಂ ಹೀನಾಯ ಸೋಲು ಕಂಡಿದ್ದಾರೆ. ಅದೇ ರೀತಿ ಅರಿಯನ್ನುಪ್ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ಮ ವಿಜಯಲಕ್ಷ್ಮಿ ಡಿಜೆಮೂರ್ತಿ ವಿರುದ್ಧ AINRC ಪಕ್ಷದ ಸಿ. ಅಯ್ಯಪ್ಪನ್‌ ಅಮೋಘ ಗೆಲುವು ದಾಖಲಿಸಿದ್ದಾರೆ.

ಪುದುಚೇರಿಯ 30 ಸ್ಥಾನಗಳಿಗೆ ಏ.9 ರಂದು ಮತದಾನ ನಡೆದಿತ್ತು. 89.87% ಮತದಾನವಾಗಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 294 ಅಭ್ಯರ್ಥಿಗಳು ಕಣದಲ್ಲಿದ್ದರು. AINRC, BJP, AIADMK ಮತ್ತು LJK ಗಳನ್ನು ಒಳಗೊಂಡಿರುವ ಆಡಳಿತಾರೂಢ NDA ಕಣದಲ್ಲಿತ್ತು. ಕಾಂಗ್ರೆಸ್, DMK ಮತ್ತು VCK ನೇತೃತ್ವದ ವಿರೋಧ ಪಕ್ಷ INDIA ಬಣವು ಸ್ಪರ್ಧೆಯಲ್ಲಿತ್ತು. ಬಹುಮತಕ್ಕೆ 16 ಸೀಟ್‌ಗಳ ಅಗತ್ಯವಿತ್ತು.

ಕಳೆದ ಚುನಾವಣೆಯಲ್ಲಿ 30 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತವನ್ನು ಪಡೆದಿತ್ತು. ಎನ್‌ಡಿಎ (NDA): 16 ಸ್ಥಾನಗಳು (ಎಐಎನ್ಆರ್‌ಸಿ: 10, ಬಿಜೆಪಿ: 6), ಯುಪಿಎ (UPA): 8 ಸ್ಥಾನಗಳನ್ನು ಜಯಿಸಿದ್ದವು.

Share This Article