– 1987ರ ಬಳಿಕ ಫಸ್ಟ್ ಟೈಂ ಅತಿಹೆಚ್ಚು ವೋಟಿಂಗ್
ಗುವಾಹಟಿ: ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ಸರ್ಕಾರವೇ ಬರುತ್ತೆ ಅಂತ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಬಿಜೆಪಿಯು ಹ್ಯಾಟ್ರಿಕ್ ಸಾಧನೆಗೆ ಉತ್ಸುಕವಾಗಿದ್ದು, ಸಿಎಂ ಹಿಮಂತ ಬಿಸ್ವಾ ಶರ್ಮಾ ಜೋಶ್‌ನಲ್ಲಿದ್ದಾರೆ. ಆದರೆ, ಗೌರವ್ ಗೊಗೋಯ್ ಸಾರಥ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ನಿರಾಸೆ ಕಾದಿದೆ.
2016 ರಲ್ಲಿ ಸರ್ಬಾನಂದ ಸೋನೋವಾಲ್ ನೇತೃತ್ವದಲ್ಲಿ ಬಿಜೆಪಿ ಮೊದಲ ಬಾರಿಗೆ ಅಸ್ಸಾಂ ನಲ್ಲಿ ಸರ್ಕಾರ ರಚಿಸಿತು. ಈ ಮೂಲಕ ಕಾಂಗ್ರೆಸ್‌ನ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿತ್ತು. 2021ರಲ್ಲಿ 2ನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸಿತ್ತು, ಹಿಮಂತ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಈಗ ಶರ್ಮಾ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಿರುವ ಬಿಜೆಪಿ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಉತ್ಸಾಹದಲ್ಲಿದೆ.

1987ರ ಬಳಿಕ ಫಸ್ಟ್ ಟೈಂ ಅತಿಹೆಚ್ಚು ವೋಟಿಂಗ್!
ಅಸ್ಸಾಂನಲ್ಲಿ 1987 ರ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಅತಿಹೆಚ್ಚು ಮತದಾನ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದ್ರೆ, ಶೇ.3 ರಷ್ಟು ಹೆಚ್ಚು ಮತದಾನ ನಡೆದಿದೆ ಅನ್ನೋದು ಗಮನಾರ್ಹ.
ಬಿಜೆಪಿ ಭದ್ರಕೋಟೆಯಾಗಿದ್ದ ಅಸ್ಸಾಂನ 126 ಸ್ಥಾನಗಳಿಗೆ ಏ.9 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ಶೇ.85 ರಷ್ಟು ಮತದಾನ ನಡೆದಿತ್ತು. ಒಟ್ಟು 722 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಸ್ಪರ್ಧಿಗಳಲ್ಲಿ 59 ಮಂದಿ ಮಹಿಳೆಯರು ಇದ್ದರು. ಅಸ್ಸಾಂನಲ್ಲಿ ಬಹುಮತಕ್ಕೆ 64 ಸೀಟ್‌ಗಳು ಬೇಕಾಗಿದ್ದವು.
ಕಾಂಗ್ರೆಸ್ 99 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿ 90, ಎಐಯುಡಿಎಫ್ 30, ಎನ್‌ಡಿಎ ಮಿತ್ರಪಕ್ಷಗಳಾದ ಅಸ್ಸಾಂ ಗಣ ಪರಿಷತ್ (ಎಜಿಪಿ) 26 ಮತ್ತು ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್) 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ವಿರೋಧ ಪಕ್ಷದ ಮೈತ್ರಿಕೂಟದಲ್ಲಿ, ರೈಜೋರ್ ದಳ 13 ಸ್ಥಾನ, ಅಸ್ಸಾಂ ಜಾತಿಯ ಪರಿಷತ್ 10, ಸಿಪಿಐ(ಎಂ) ಮೂರು ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಆಮ್ ಆದ್ಮಿ ಪಕ್ಷ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ತಲಾ 18 ಸ್ಥಾನಗಳಲ್ಲಿ, ಟಿಎಂಸಿ 22 ಮತ್ತು ಜೆಎಂಎಂ 16 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದಲ್ಲದೆ, 258 ಸ್ವತಂತ್ರ ಅಭ್ಯರ್ಥಿಗಳು ಇದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಎರಡನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಂಡಿತ್ತು. ಎನ್‌ಡಿಎ (NDA): 75 ಸ್ಥಾನಗಳು (ಬಿಜೆಪಿ: 60). ಮಹಾಜೋತ್ (ಕಾಂಗ್ರೆಸ್ ನೇತೃತ್ವ): 50 ಸ್ಥಾನಗಳು ಗೆದ್ದಿದ್ದವು.

