ಚೆನ್ನೈ: ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ಸಾಮಾನ್ಯವಾಗಿ ಒಮ್ಮೆ ಅಧಿಕಾರ ಕೊಡುವ ತಮಿಳುನಾಡಿನ ಮತದಾರ, ಮತ್ತೊಂದು ಅವಧಿಗೆ ಅದೇ ಮೈತ್ರಿಕೂಟಕ್ಕೆ ಅಧಿಕಾರ ಕೊಡುವುದಿಲ್ಲ. ಆದ್ರೆ, ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ ಅನ್ನೋದಕ್ಕೆ ಚುನಾವಣೋತ್ತರ ಸಮೀಕ್ಷೆಗಳು ಸಾಕ್ಷಿಯಾಗಿದೆ.
ಡಿಎಂಕೆ ಮೈತ್ರಿ ಕೂಟ 125 ರಿಂದ 145 ಸ್ಥಾನ, ಎಐಎಡಿಎಂಕೆ 65 ರಿಂದ 85 ಸ್ಥಾನ ಗಳಿಸಬಹುದು. ಇನ್ನೂ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದ ದಳಪತಿ ನೇತೃತ್ವದ ಟಿವಿಕೆ 16 ರಿಂದ 26 ಸ್ಥಾನ ಗಳಿಸಬಹುದು ಎಂದು ಪಿ-ಮಾರ್ಕ್ ಸಮೀಕ್ಷೆ ತಿಳಿಸಿದೆ. ಬಹುಮತಕ್ಕೆ 118 ಸ್ಥಾನಗಳು ಬೇಕಿವೆ.
ಜೆವಿಸಿ ಚುನಾವಣೋತ್ತರ ಸಮೀಕ್ಷೆಯು ಡಿಎಂಕೆ ಮೈತ್ರಿಕೂಟ 75 ರಿಂದ 95, ಎಐಎಡಿಎಂಕೆ ಮೈತ್ರಿಕೂಟ 128 ರಿಂದ 147, ಟಿವಿಕೆಗೆ 8 ರಿಂದ 15 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ.
ಅದೇ ರೀತಿ ಜೀ ನ್ಯೂಸ್ ಸಮೀಕ್ಷೆ ಡಿಎಂಕೆ ಮೈತ್ರಿಕೂಟ 140 ರಿಂದ 162 ಸ್ಥಾನ, ಎಐಎಡಿಎಂಕೆ ಮೈತ್ರಿಕೂಟ 52 ರಿಂದ 74 ಸ್ಥಾನ ಇತರರರು 13 ರಿಂದ 33 ಸ್ಥಾನಗಳನ್ನ ಗಳಿಸಬಹುದು ಎಂದು ತಿಳಿಸಿದೆ.
ಒಂದೇ ಹಂತದಲ್ಲಿ ನಡೆದಿದ್ದ ಚುನಾವಣೆ
ತಮಿಳುನಾಡಿನ 234 ಕ್ಷೇತ್ರಗಳಿಗೆ ಈ ಬಾರಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಶೇ. 86ರಷ್ಟು ಮತದಾನವಾಗಿತ್ತು, ಇದು ಕೂಡಾ ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಮತದಾನವಾಗಿತ್ತು. ಜನಪ್ರಿಯ ನಟ ದಳಪತಿ ವಿಜಯ್ ಅವರ ಪಾರ್ಟಿ ಟಿವಿಕೆ, ಮೊದಲ ಬಾರಿಗೆ ಚುನಾವಣಾ ಆಖಾಡಕ್ಕೆ ಇಳಿದಿರುವ ಹಿನ್ನಲೆಯಲ್ಲಿ ಈ ಬಾರಿಯ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. 2021ರಲ್ಲಿ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಎಲ್ಲಾ ಸರ್ವೇಗಳು, ಡಿಎಂಕೆ ಮೈತ್ರಿಕೂಟಕ್ಕೆ ಬಹುಮತ ಎಂದು ಹೇಳಿತ್ತು. ಅದರಂತೆ ಚುನಾವಣಾ ಫಲಿತಾಂಶವೂ ನಿಜವಾಗಿತ್ತು.
ತಮಿಳುನಾಡು 2021 ರ ಫಲಿತಾಂಶ
ಒಟ್ಟು ಕ್ಷೇತ್ರ – 234
ಬಹುಮತಕ್ಕೆ – 118
ಡಿಎಂಕೆ – 133
ಕಾಂಗ್ರೆಸ್ – 18
ವಿಸಿಕೆ – 4
ಸಿಪಿಐ – 2
ಸಿಪಿಐ(ಎಂ) – 2
ಡಿಎಂಕೆ ಮೈತ್ರಿ ಒಟ್ಟು – 159
ಎನ್ಡಿಎ
ಎಐಎಡಿಎಂಕೆ – 66
ಬಿಜೆಪಿ – 4
ಪಿಎಂಕೆ – 5
ಎನ್ಡಿಎ ಮೈತ್ರಿ ಒಟ್ಟು – 75

