– ಕೌಂಟರ್ ಅಫಿಡವಿಟ್ ಸಲ್ಲಿಕೆಗೆ ಕೋರ್ಟ್ ಸೂಚನೆ
ನವದೆಹಲಿ: ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನ (Soujanya Rape And Murder Case) ಮರು ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಪ್ರಕರಣದ ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೌಜನ್ಯ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯನ್ನ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಕುಸುಮಾವತಿ ಗೌಡ ಪರ ವಾದ ಮಂಡಿಸಿದ ವಕೀಲರು ಪ್ರಕರಣದಲ್ಲಿನ ಹಲವು ಸಾಕ್ಷಿಗಳು ಅನುಮಾನಸ್ಪವಾಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಲಯ ರಾಜ್ಯ ಸರ್ಕಾರ (Karnataka Government) ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು. ಇದೇ ವೇಳೆ ರಾಜ್ಯ ಸರ್ಕಾರ ಮತ್ತು ಸಿಬಿಐ ಲಿಖಿತ ಜುಲೈ 14 ರೊಳಗೆ ಕೌಂಟರ್ ಅಫಿಡೆವಿಟ್ ಸಲ್ಲಿಸಲು ಸೂಚನೆ ನೀಡಿತು. ಇದನ್ನೂ ಓದಿ: West Bengal Election | ಕಮಲದ ಬಟನ್ ಮೇಲೆ ಟೇಪ್ – ಫಾಲ್ಟಾದಲ್ಲಿ ಮತದಾನ ಸ್ಥಗಿತ

ಪ್ರಕರಣದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಸಿಬಿಐ ಪರ ಅಭಿಯೋಜಕರು ಕೋರ್ಟ್ ಹಾಲ್ ನಲ್ಲಿ ಇರಲಿಲ್ಲ. ಮಧ್ಯಾಹ್ನ ಮತ್ತೆ ಪ್ರಕರಣದ ವಿಚಾರಣೆ ನಡೆದಾಗಲೂ ರಾಜ್ಯ ಸರ್ಕಾರ ಮತ್ತು ಸಿಬಿಐ ತಮ್ಮ ನಿಲುವುಗಳನ್ನ ಸ್ಪಷ್ಟಪಡಿಸಲಿಲ್ಲ. ಈ ಹಿನ್ನೆಲೆ ಮೇಲ್ಮನವಿ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯವು ಪ್ರಮುಖ ನಿರ್ದೇಶನಗಳನ್ನು ನೀಡಿತು.
ಪ್ರಮುಖ ಸಾಕ್ಷ್ಯಗಳು ಮತ್ತು ದಾಖಲೆಗಳನ್ನ ಮುಚ್ಚಿದ ಲಕೋಟೆಯಲ್ಲಿ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಮನ್ನಣೆ ನೀಡಿ ಪ್ರಕರಣದ ಎಲ್ಲ ಪ್ರಮುಖ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕು, ರಾಜ್ಯ ಸರ್ಕಾರ ಮತ್ತು ಸಿಬಿಐ ಎರಡು ವಾರಗಳಲ್ಲಿ ಲಿಖಿತ ರೂಪದಲ್ಲಿ ತಮ್ಮ ನಿಲುವು ಸಲ್ಲಿಸಬೇಕು. ಮರುತನಿಖೆ ಯಾವ ಸಂಸ್ಥೆ ನಡೆಸಬಹುದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪೀಠ ಸೂಚಿಸಿತು.
ಅರ್ಜಿದಾರ ಕುಸುಮಾವತಿ ಅವರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶೋಭಾ ಗುಪ್ತ, ಶೇಖರ ದೇವಸ್, ಸಂಜಯ್ ನೂಲವಿ, ಅಶುತೋಷ್ ದುಬೇ ಸೇರಿದಂತೆ ಅನೇಕ ನ್ಯಾಯವಾದಿಗಳು ಹಾಜರಿದ್ದರು. ಸಂತೋಷ್ ರಾವ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಗುರುರಾಜ್ ವಾದ ಮಂಡಿಸಿದರು. ಇದನ್ನೂ ಓದಿ: Bengaluru Rain | ಬೆಂಗಳೂರಲ್ಲಿ ಆಲಿಕಲ್ಲು ಮಳೆ, ಗಾಳಿ ಅಬ್ಬರ – ವಿಧಾನಸೌಧಕ್ಕೂ ನುಗ್ಗಿದ ನೀರು

