– ಬಿಸಿಸಿಐ ಬಹುದೊಡ್ಡ ನಿರ್ಧಾರ
ಮುಂಬೈ: 2027ರ ಏಕದಿನ ವಿಶ್ವಕಪ್ ಟೂರ್ನಿ ವರೆಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಅಜಿತ್ ಅಗರ್ಕರ್ (Ajit Agarkar) ಅವರೇ ಮುಂದುವರಿಯುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ಅಗರ್ಕರ್ ಅವರ ಒಪ್ಪಂದವು 2026ರ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಆದಾಗ್ಯೂ ಬಿಸಿಸಿಐ (BCCI) ಬಹುದೊಡ್ಡ ನಿರ್ಧಾರ ಕೈಗೊಂಡಿದ್ದು, 2027ರ ವಿಶ್ವಕಪ್ ವರೆಗೆ ಅಗರ್ಕರ್ ಅವರನ್ನ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಮುಂದುವರಿಸಲು ಒಲವು ತೋರಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಬಿಸಿಸಿಐ ಸದ್ಯ 2027ರ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಯ ಮೇಲೆ ನಿಗಾ ವಹಿಸಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಅಗರ್ಕರ್ ಅವರ ಅವಧಿಯನ್ನ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಕೆಕೆಆರ್‌ಗೆ ಶ್ರೀಲಂಕಾ ವೇಗಿ ಎಂಟ್ರಿ – ಸತತ 6 ಸೋಲುಗಳಿಂದ ಕಂಗೆಟ್ಟಿರೋ ತಂಡಕ್ಕೆ ಸಿಗುತ್ತಾ ಬೂಸ್ಟ್?
ಅಗರ್ಕರ್ ಅಧಿಕಾರ ಅವಧಿಯು ಅತ್ಯಂತ ಯಶಸ್ವಿಯಾಗಿದೆ ಎಂದು ಬಿಸಿಸಿಐ ಪರಿಗಣಿಸಿದೆ. ಅವರ ಅವಧಿಯಲ್ಲಿ ಟೀಂ ಇಂಡಿಯಾ ಪ್ರಮುಖ ಟೂರ್ನಿಗಳಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಾ ಬಂದಿದೆ. ಐಸಿಸಿ ಟಿ20 ವಿಶ್ವಕಪ್ 2024, ಚಾಂಪಿಯನ್ಸ್ ಟ್ರೋಫಿ – 2025, ಐಸಿಸಿ ಟಿ20 ವಿಶ್ವಕಪ್ 2026, ಟಿ20 ಏಷ್ಯಾಕಪ್ 2025 ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲಿಲ್ಲದೇ ಫೈನಲ್ ತಲುಪಿತ್ತು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ
ಮುಖ್ಯವಾಗಿ ಹಿರಿಯ ಮತ್ತು ಯುವ ಆಟಗಾರರ ನಡುವೆ ಸಮತೋಲನ ಸಾಧಿಸುವ ಜೊತೆಗೆ ಹೊಸ ಪರಿವರ್ತನೆ ಹಾದಿಯನ್ನ ಕಂಡಿದೆ. ಈ ಎಲ್ಲ ಬೆಳವಣಿಗೆಗಳನ್ನ ಗಮನಿಸಿ ಬಿಸಿಸಿಐ 2027ರ ಏಕದಿನ ವಿಶ್ವಕಪ್ ಟೂರ್ನಿವರೆಗೆ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಅಗರ್ಕರ್ ಅವರನ್ನೇ ಮುಂದುವರಿಸುವ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ ಈ ಬಗ್ಗೆ ಬಿಸಿಸಿಐ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ಕೊನೆಯ 3 ಎಸೆತದಲ್ಲಿ ಹೋಯ್ತು 16 ರನ್ – ತವರಲ್ಲಿ ಆರ್‌ಸಿಬಿಯನ್ನು ಕೆಡವಿದ ಡೆಲ್ಲಿ



