ಶಿವಮೊಗ್ಗ: ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಹಾಗೂ ಉಸಿರಾಟದ ತೊಂದರೆ ಹೊಂದಿರುವ ನವಜಾತ ಶಿಶುಗಳ ವಿಶೇಷ ಕಾಳಜಿಗಾಗಿ ಮೆಗ್ಗಾನ್ ಆಸ್ಪತ್ರೆ (Mc.Gann Hospital) ಮಕ್ಕಳ ವಿಭಾಗದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್ಐಸಿಯು ಘಟಕ (NICU Unit) ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (B.Y Raghavendra) ತಿಳಿಸಿದರು.

ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಸಿಮ್ಸ್ ಸಂಸ್ಥೆಯ ಮಕ್ಕಳ ವಿಭಾಗಕ್ಕೆ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್ಐಸಿಯು ಘಟಕ ಸ್ಥಾಪಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರ ಸಂಸದರ ನಿಧಿಯಲ್ಲಿ 5 ಕೋಟಿ ರೂ. ಮಂಜೂರಾಗಿದೆ. ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚಾದಂತೆ ಎನ್‌ಐಸಿಯು ಮೇಲಿನ ಒತ್ತಡವೂ ನಿರಂತರವಾಗಿ ಹೆಚ್ಚುತ್ತಿತ್ತು. ಇದನ್ನು ಗಮನದಲ್ಲಿಟ್ಟು ಕೇಂದ್ರ ಹಣಕಾಸು ಸಚಿವರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಈ ಬೇಡಿಕೆಗೆ ಸ್ಪಂದಿಸಿ 5 ಕೋಟಿ ರೂ. ಮಂಜೂರು ಮಾಡಿರುವುದು ಸಂತಸ ತಂದಿದೆ. ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಕುವೆಂಪು ವಿವಿ ಸ್ಮಾರ್ಟ್ ಕ್ಲಾಸ್ ಹಗರಣ – ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇಮಿಸಿ ರಾಜ್ಯಪಾಲರ ಆದೇಶ

ಆರ್‌ಡಿಪಿಆರ್ ವತಿಯಿಂದ ಕಾಮಗಾರಿ ಕೈಗೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. 4.40 ಕೋಟಿ ರೂ. ಉಪಕರಣಗಳಿಗೆ ಹಾಗೂ ಉಳಿದ 60 ಲಕ್ಷ ರೂ. ಮೂಲಭೂತ ಸೌಲಭ್ಯಕ್ಕೆ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿಎಸ್‌ಆರ್ ನಿಧಿಯಿಂದ ಸೇವೆ: ಜಿಲ್ಲೆಯ ದೃಷ್ಟಿಹೀನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಭಾರತೀಯ ಸೌರಶಕ್ತಿ ನಿಗಮ ನಿಯಮಿತದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ ನಗರದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಗಳಿಗೆ 23 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಬ್ರೈಲ್ ಕಲಿಕಾ ಸಾಧನಗಳನ್ನು ಒದಗಿಸಲಾಗುತ್ತಿದೆ.

ಇನ್ನು ಒಎನ್ ಜಿಸಿ ಯವರು ಎಸ್ಸಿ- ಎಸ್ಟಿ ಸಮುದಾಯ ವಾಸಿಸುವ 1 ಸಾವಿರ ಗ್ರಾಮಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ಹಾಗೂ ಬೈಂದೂರು ಕ್ಷೇತ್ರಕ್ಕೆ 600 ಹೊಲಿಗೆ ಮಷಿನ್ ಗಳನ್ನು ನೀಡಲು ಒಪ್ಪಿದ್ದಾರೆ. ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕೆಲಸಗಳು ಆಗುತ್ತಿದೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಗೀತಾ, ಡಿಹೆಚ್‌ಓ ಡಾ.ನಟರಾಜ್, ಸಿಮ್ಸ್ ಸಿಎಓ ಉಮಾ ಸದಾಶಿವ ಹಾಗೂ ಇತರರಿದ್ದರು. ಇದನ್ನೂ ಓದಿ: ಕಲಘಟಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ – ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ಸ್ಥಗಿತ, ಮಾರ್ಗ ಬದಲಾವಣೆ

