ಕಾರವಾರ: ಹುಬ್ಬಳ್ಳಿ – ಕಾರವಾರ (Hubballi – Karwar) ರಾಷ್ಟ್ರೀಯ ಹೆದ್ದಾರಿ 63ರ ದೇವಿಕೊಪ್ಪ ಗ್ರಾಮದ ಐ.ಬಿ ಕ್ರಾಸ್ ಬಳಿ ಎಲ್‌ಪಿಜಿ ಅನಿಲ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ (Accident) ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿದೆ.

ಅನಿಲ ಸೋರಿಕೆಯಿಂದಾಗಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಲಘಟಗಿ (Kalghatagi) -ಯಲ್ಲಾಪುರ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಅಮೆರಿಕ ಮೂಲದ ಮಹಿಳೆ ಮೇಲೆ ರೇಪ್ ಆರೋಪ – ಇಬ್ಬರು ಅರೆಸ್ಟ್, ಮೇ 3ರ ವರೆಗೆ ಜೈಲಿಗೆ

ಪರ್ಯಾಯ ಮಾರ್ಗಗಳ ವಿವರ
ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಅನಾಹುತ ತಡೆಯಲು ಪೊಲೀಸ್ ಇಲಾಖೆಯು ವಾಹನಗಳ ಸಂಚಾರ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ.

* ಹುಬ್ಬಳ್ಳಿ – ಕಾರವಾರ – ಅಂಕೋಲಾ ಕಡೆಗೆ ಹೋಗುವವರು: ಹುಬ್ಬಳ್ಳಿಯಿಂದ ತಡಸ್ ಕ್ರಾಸ್ – ಮುಂಡಗೋಡ ಮಾರ್ಗವಾಗಿ ಸಂಚರಿಸಬೇಕು.
* ಧಾರವಾಡ – ಕಲಘಟಗಿ – ಯಲ್ಲಾಪುರ ಮಾರ್ಗದ ವಾಹನಗಳು: ಈ ವಾಹನಗಳು ಕೂಡ ಹುಬ್ಬಳ್ಳಿ – ತಡಸ್ ಕ್ರಾಸ್ – ಮುಂಡಗೋಡ ಮಾರ್ಗವನ್ನೇ ಬಳಸಬೇಕು.
* ಯಲ್ಲಾಪುರದಿಂದ ಹುಬ್ಬಳ್ಳಿ/ಧಾರವಾಡಕ್ಕೆ ಬರುವವರು:ಯಲ್ಲಾಪುರ ಹಳಿಯಾಳ ಕ್ರಾಸ್ – ಹಳಿಯಾಳ – ಧಾರವಾಡ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
* ತಡಸ್ ಗ್ರಾಮದಿಂದ ಬರುವವರು, ತಬಕದ ಹೊನ್ನಳ್ಳಿ-ಕಲಘಟಗಿ ಮಾರ್ಗದ ಬದಲಾಗಿ ಮುಂಡಗೋಡ-ಶಿರಸಿ ಮಾರ್ಗವನ್ನು ಬಳಸುವಂತೆ ತಡಸ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ ಮತ್ತು ಮುಂಡಗೋಡ ಪೊಲೀಸ್ ಠಾಣೆಗಳಿಗೆ ತುರ್ತು ಮಾಹಿತಿ ರವಾನಿಸಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸರೊಂದಿಗೆ ಸಹಕರಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ. ಇದನ್ನೂ ಓದಿ: ಪ್ರೇಮಾ ನಂಬರ್ ಬ್ಲಾಕ್, ಮಾಜಿ ಲವರ್ ಸಂಪರ್ಕದಲ್ಲಿದ್ದ ಕಿರಣ್ – ಬ್ಯಾಡರಹಳ್ಳಿ ಕೇಸ್‌ಗೆ ಹೊಸ ಟ್ವಿಸ್ಟ್

