ರಸ್ತೆ ರಿಪೇರಿ ಮಾಡಿ, ಮನೆ ಪೂರ್ಣಗೊಳಿಸಿ- ಶೌರ್ಯ ಪ್ರಶಸ್ತಿ ಪಡೆದ ಬಾಲಕನ ಮನವಿ

Public TV
2 Min Read

ರಾಯಚೂರು: ಕಳೆದ ವರ್ಷ ಕೃಷ್ಣಾ ಪ್ರವಾಹಕ್ಕೆ ರಾಯಚೂರಿನ ದೇವದುರ್ಗದ ಹಿರೇರಾಯಕುಂಪಿ ಸೇತುವೆ ಮುಳುಗಡೆಯಾಗಿದ್ದಾಗ ಅಂಬುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಮೆರೆದಿದ್ದ ಗ್ರಾಮದ ಬಾಲಕ ವೆಂಕಟೇಶ್‍ಗೆ ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿಯೂ ಬಂತು. ಆದರೆ ಗ್ರಾಮದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಗೂಗಲ್ ಮಾರ್ಗದ ಹಿರೇರಾಯಕುಂಪಿ ಸೇತುವೆ ಎರಡು ಕಡೆ ಬಿರುಕು ಬಿಟ್ಟಿದೆ. ಸೇತುವೆ ನಿರ್ಮಾಣವಾಗಿ ಐದಾರು ವರ್ಷಗಳಷ್ಟೇ ಕಳೆದಿದ್ದರೂ ಸೇತುವೆ ಮೇಲಿನ ರಸ್ತೆ ಹದಗೆಟ್ಟಿದೆ. ಸೇತುವೆ ಬಳಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಅಲ್ಲದೆ ಕಾಲುವೆ ಸಂಪರ್ಕ ರಸ್ತೆಗೆ ಎರಡು ಕಡೆಗಳಲ್ಲಿ ರಸ್ತೆತಡೆಗಳು ಇಲ್ಲ. ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾದರೆ ಮತ್ತೆ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ. ನಾರಾಯಣಪುರ ಜಲಾಶಯದಿಂದ ಕಳೆದ ವರ್ಷ 5 ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗ ಗ್ರಾಮಕ್ಕೂ ನೀರು ನುಗ್ಗಿತ್ತು. ಸೇತುವೆ ಸಹ ಮುಳಗಿತ್ತು. ಆಗ ಯಾದಗಿರಿ ಜಿಲ್ಲೆಯ ಕಡೆಗೆ ಹೊರಟಿದ್ದ ಅಂಬುಲೆನ್ಸ್ ಗೆ ಬಾಲಕ ವೆಂಕಟೇಶ್ ನೀರಿನಲ್ಲಿ ನಡೆದುಕೊಂಡು ಬಂದು ದಾರಿ ತೋರಿಸಿದ್ದ. ಬಾಲಕನ ಸಾಹಸ ಮೆಚ್ಚಿ ಜಿಲ್ಲಾಡಳಿತ ಸ್ವಾತಂತ್ರ್ಯ ದಿನಾಚರಣೆ ವೇಳೆ ಸನ್ಮಾನಿಸಿತ್ತು.

ಸಾಕಷ್ಟು ಸಂಘ ಸಂಸ್ಥೆಗಳು ಮುಂದೆ ಬಂದು ಬಾಲಕ ಓದಿನ ಹೊಣೆಯನ್ನ ಹೊತ್ತುಕೊಂಡಿದ್ದರು. ಪ್ರವಾಹದ ವೇಳೆ ಮನೆ ಹಾಳಾಗಿದ್ದರಿಂದ ಹೊಸ ಮನೆಯನ್ನ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದವು. ಆದರೆ ಖಾಸಗಿ ಸಂಸ್ಥೆಗಳು ಮನೆ ನಿರ್ಮಾಣವನ್ನೇನೋ ಆರಂಭಿಸಿದವು. ಆದರೆ ಅರ್ಧಕ್ಕೆ ನಿಲ್ಲಿಸಲಾಗಿದ್ದ ಮನೆ ಇನ್ನೂ ಪೂರ್ಣವಾಗಿಲ್ಲ. ಈಗ ಯಾರೂ ಇತ್ತ ತಲೆಯೂ ಹಾಕುತ್ತಿಲ್ಲ. ಇನ್ನೊಂದೆಡೆ ಬಿರುಕು ಬಿಟ್ಟ ಸೇತುವೆ ಹಾಗೂ ರಸ್ತೆಯ ರಿಪೇರಿಯೂ ಆಗಿಲ್ಲ. ಮಳೆ ನಿಂತ ಮೇಲೆ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ. ರಸ್ತೆ ರಿಪೇರಿ ಮಾಡಿ ನಮ್ಮ ಮನೆ ಪೂರ್ಣಗೊಳಿಸಿ ಕೊಡಿ ಅಂತ ಬಾಲಕ ವೆಂಕಟೇಶ್ ಹಾಗೂ ಅವನ ಕುಟುಂಬ ಕೇಳಿಕೊಂಡಿದೆ. ಇದನ್ನೂ ಓದಿ: ಪ್ರವಾಹದಲ್ಲಿ ಅಂಬುಲೆನ್ಸ್‌ಗೆ ದಾರಿ ತೋರಿಸಿದ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ

ಸದ್ಯ ನಾರಾಯಣಪುರ ಜಲಾಶಯದಿಂದ 2 ಲಕ್ಷ 85 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಹಿನ್ನೀರು ಗ್ರಾಮದ ಜಮೀನುಗಳಿಗೆ ನುಗ್ಗುತ್ತಿದೆ. ಹೀಗಾಗಿ ಹಿರೇರಾಯಕುಂಪಿ ಗ್ರಾಮಸ್ಥರು ಮತ್ತೊಮ್ಮೆ ಪ್ರವಾಹದ ಭೀತಿಯನ್ನ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ

Share This Article
Leave a Comment

Leave a Reply

Your email address will not be published. Required fields are marked *