ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

Public TV
2 Min Read

ಇಸ್ಲಾಮಾಬಾದ್/ನವದೆಹಲಿ: ಜಮ್ಮು ಕಾಶ್ಮೀರದ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ಕರೆದಿರುವ ಬೆನ್ನಲ್ಲೇ ಪಾಕಿಸ್ತಾನ ಕಿರಿಕ್ ಎತ್ತಿದೆ.

ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿ, ಕಾಶ್ಮೀರವನ್ನು ವಿಭಜಿಸಲು ಮತ್ತು ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಭಾರತ ನಡೆಸುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ಹೇಳಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

ಜೂನ್ 24 ರಂದು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ 14 ಪ್ರಮುಖ ರಾಜಕೀಯ ನಾಯಕರ ಜೊತೆ ದೆಹಲಿಯಲ್ಲಿ ಸಭೆಯನ್ನು ಕರೆದಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವುದೂ ಸೇರಿದಂತೆ ರಾಜಕೀಯ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರದ ಇತರ ಕೆಲವು ನಾಯಕರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜೆಕೆಎಪಿ ಪಕ್ಷದ ಅಲ್ತಾಫ್ ಬುಕಾರಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಸಜ್ಜದ್ ಲೋನ್ ಅವರಿಗೆ ಸಭೆಗೆ ಆಹ್ವಾನ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿ, ಜೂನ್ 24ರ ಸಭೆಗೆ ಆಹ್ವಾನ ದೊರೆತಿದೆ. ಸಭೆಯಲ್ಲಿ ಭಾಗವಹಿಸುವ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಪಕ್ಷದ ಸದಸ್ಯರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಜತೆ ಕೇಂದ್ರ ಸರ್ಕಾರ ನಡೆಸುತ್ತಿರುವ ಮೊದಲ ಸಭೆ ಇದಾಗಿದ್ದು ಮತ್ತೆ ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದೆ.

2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ರದ್ದಾಗಿದ್ದ ವಿಶೇಷ ಸ್ಥಾನಮಾನದ ಮರು ಸ್ಥಾಪನೆಗಾಗಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳು ಒಂದಾಗಿ ಗುಪ್ಕಾರ್ ಮೈತ್ರಿಯನ್ನು ಮಾಡಿದ್ದವು. ಎನ್‍ಸಿ, ಪಿಡಿಪಿ, ಸಿಪಿಎಂ, ಪೀಪಲ್ಸ್ ಮೂವ್‍ಮೆಂಟ್ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಮಾಡಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಿದ್ದವು.

Share This Article
Leave a Comment

Leave a Reply

Your email address will not be published. Required fields are marked *