Connect with us

Latest

ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

Published

on

ನವದೆಹಲಿ: ಕಾಂಗ್ರೆಸ್‌ ಸದಸ್ಯ, ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಕಣ್ಣೀರು ಹಾಕಿದ್ದಾರೆ.

ಗುಲಾಂ ನಬಿ ಆಜಾದ್ ಕಾರ್ಯಗಳನ್ನು ಶ್ಲಾಘಿಸಿದ ಮೋದಿ, ಆಜಾದ್ ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿರಲಿಲ್ಲ. ದೇಶ ಮತ್ತು ಸದನದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಹೇಳಿ ಭಾವುಕರಾದರು.

ಆಜಾದ್‌ ಅವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಸಂದರ್ಭವನ್ನು ಪ್ರಸ್ತಾಪಿಸಿದ ಮೋದಿ, ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದಾಗಿ ಗುಜರಾತಿನ ಜನ ಸಿಲುಕಿಕೊಂಡಾಗ ಆಜಾದ್‌ ಮತ್ತು ಪ್ರಣಬ್‌ ಮುಖರ್ಜಿ ಅವರ ಶ್ರಮವನ್ನು ನಾನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ. ಆ ದಿನ ರಾತ್ರಿ ಗುಲಾ ನಬಿಜೀ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಿ ಕಣ್ಣೀರು ಹಾಕಿದರು.

ಅವರು ತಮ್ಮ ಕುಟುಂಬದ ಸದಸ್ಯರಂತೆ ನಮ್ಮ ಜನರನ್ನು ನೋಡಿಕೊಂಡರು. ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅಧಿಕಾರದಲ್ಲಿದ್ದಾಗ ಹೇಗೆ ಕೆಲಸ ಮಾಡಿದ್ದರು ಎಂಬುದು ನೆನಪಿನಲ್ಲಿರುತ್ತದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ನಾನು ಮತ್ತು ಗುಲಾ ನಬಿ ಆಜಾದ್‌ ಹಲವು ವರ್ಷಗಳ ಹಿಂದೆಯೇ ಪರಿಚಿತರು. ನಾವಿಬ್ಬರು ಒಟ್ಟಿಗೆ ಮುಖ್ಯಮಂತ್ರಿಗಳಾಗಿದ್ದೆವು. ನಾನು ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಗುಲಾಂ ನಬಿ ಅವರ ಜೊತೆ ಮಾತನಾಡಿದ್ದೆ. ಬಹಳಷ್ಟು ಜನರಿಗೆ ಒಂದು ವಿಚಾರ ತಿಳಿದಿಲ್ಲ. ಆಜಾದ್‌ ಅವರಿಗೆ ಗಾರ್ಡನಿಂಗ್‌ ಅಂದರೆ ಬಹಳ ಇಷ್ಟ ಎಂದು ತಿಳಿಸಿದರು.

ಸೋಮವಾರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್‌ ಅವರನ್ನು ಶ್ಲಾಘಿಸಿ ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದರು.

ಆಜಾದ್‌ ಅವರು ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆದಿದ್ದಕ್ಕೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದರು. ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಸಕಾರಾತ್ಮಕವಾಗಿ ನೋಡಬೇಕೇ ಹೊರತೂ ಅವರನ್ನು ಜಿ-23ರ ಗುಂಪಿಗೆ ಸೇರಿಸಬಾರದು ಎಂದು ಹೇಳಿ ವ್ಯಂಗ್ಯವಾಡಿದ್ದರು.

ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಸುಧಾರಣೆ ಕೋರಿ ಪತ್ರ ಬರೆದು 23 ನಾಯಕರು ಬಂಡಾಯ ಎದ್ದಿದ್ದನ್ನು ಪರೋಕ್ಷವಾಗಿ ಮೋದಿ ಉಲ್ಲೇಖಿಸಿದ್ದರು.

Click to comment

Leave a Reply

Your email address will not be published. Required fields are marked *