ಸಿದ್ದಗಂಗಾ ಶ್ರೀಗಳ 99ನೇ ಜನ್ಮದಿನೋತ್ಸವಕ್ಕೆ ಗುರುವಂದನಾ ಕಾರ್ಯಕ್ರಮ ನಡೆದಿತ್ತು. ಮಾನವ ಮಾನವ ಸಂಬಂಧಗಳೇ ನುಚ್ಚು ನೂರಾಗುತ್ತಿರುವ ನಿರಾಸೆಯ ಸನ್ನಿವೇಶದಲ್ಲಿ ಮಾನವ ಸೇವೆಯೇ ಮಹಾದೇವನ ಸೇವೆ ಎಂದು ಭಾವಿಸಿ ನೂರು ದಾಟಿರುವ ವಯಸಿನಲ್ಲಿಯೂ ಆಯಾಸ ಎನ್ನದೇ ದುಡಿಯುತ್ತಿರುವ ಇಂತಹ ಲೋಕ ಜಂಗಮನಿಗಿಲ್ಲದೇ ಮತ್ಯಾರಿಗೆ ಗುರುವಂದನೆ ಸಲ್ಲಬೇಕು ಅಂತಾ ಹೇಳಿಕೊಂಡು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಅಂದಿನ ರಾಷ್ಟ್ರಪತಿ ಆಗಿದ್ದ ಎಪಿಜೆ ಅಬ್ದುಲ್ ಕಲಾಂ ಆಗಮಿಸಿದ್ದರು.
ವಿಮಾನದಲ್ಲಿ ಪ್ರಯಾಣಿಸುವಾಗಲೇ ಕಲಾಂ ಶ್ರೀಗಳಿಗೆ ಕವನವೊಂದನ್ನು ಬರೆದರು. ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಸುತ್ತೂರು ಶ್ರೀಗಳಿಗೆ ಫೋನ್ ಮಾಡಿ, ಸಾಹೇಬ್ರು ಸಿದ್ದಗಂಗಾ ಶ್ರೀಗಳ ಬಗ್ಗೆ ಕವಿತೆ ಬರೆಯುತ್ತಾರೆ. ಅದನ್ನು ಫ್ಯಾಕ್ಸ್ ಮಾಡಲಾಗುವುದು. ತಕ್ಷಣಕ್ಕೆ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿಸಿ ಗುರುವಂದನೆ ಕಾರ್ಯಕ್ರಮದಲ್ಲಿ ಹಾಡಿಸಲು ಸಾಧ್ಯವೇ ಎಂದು ಕೇಳಿದರು.
ಕಲಾಂ ಬರೆದ ಕವಿತೆಯನ್ನು ಗೊ.ರು ಚನ್ನಬಸಪ್ಪ ಅವರು ಕನ್ನಡಕ್ಕೆ ತರ್ಜುಮೆ ಮಾಡುತ್ತಾರೆ. ಅಂದು ಗುರುವಂದನಾ ಕಾರ್ಯಕ್ರಮದಲ್ಲಿ ಸುಶ್ರಾವ್ಯವಾಗಿ ಇದನ್ನು ಹಾಡಲಾಗುತ್ತದೆ. ಕಲಾಂ ತನ್ನ ಸ್ಫೂರ್ತಿಯ ಸೆಲೆಯನ್ನು ಕಣ್ತುಂಬಿಸಿಕೊಂಡು ಕವನವನ್ನು ಅರ್ಪಿಸಿ ಖುಷಿಪಟ್ರಂತೆ.
ಕಲಾಂ ಬರೆದ ಕವಿತೆ:
ನೀವು ನಿಮ್ಮೆದುರಿಗೆ ನೋಡಿ ಒಬ್ಬ ರಸಋಷಿ
ಸುಂದರ ಅನುಭಾವದ ಹಾರೈಕೆ ಹೊತ್ತ ಯೋಗಋಷಿ
ಅನುದಿನವೂ ಭಗವಂತ ನಿಮಗೆ ಕರುಣಿಸಿದ ಈ ಯೋಗಿ
ಬೆಲೆಯುಳ್ಳ ಜೀವನದ ವೈಢೂರ್ಯವಾಗಿ
ತಪದ ಬದುಕಿನ ಅಮೂಲ್ಯ ಹಾರವಾಗಿ
ಮೂವತ್ತಾರು ಸಾವಿರ ವಜ್ರಗಳ ಸಂಯೋಗಿ
ಮಾನವೀಯತೆಯೇ ಈ ಋಷಿಯ ಸಂದೇಶ
ಓ ನನ್ನ ನಾಗರೀಕ ಬಂಧುಗಳೇ
ಕೊಡುವಲ್ಲಿ ಪಡೆಯಿರಿ ನೆಮ್ಮದಿಯ ದೇಹಾತ್ಮಗಳಲ್ಲಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv