‘ಮಿಸೈಲ್ ಮ್ಯಾನ್’ ಕಲಾಂರ 88ನೇ ಹುಟ್ಟುಹಬ್ಬ – ನಮೋ ವಿಡಿಯೋ ನಮನ

Public TV
2 Min Read
abdul kalam 4

ನವದೆಹಲಿ: ಇಂದು ಭಾರತ ಕಂಡ ಅದ್ಭುತ ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ 88 ವರ್ಷದ ಜಯಂತೋತ್ಸವ. ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಿಸಲಾಗುತ್ತದೆ.

ದೇಶ ಕಂಡ ಪ್ರೀತಿಯ ಮಾಜಿ ರಾಷ್ಟ್ರಪತಿಗಳಿಗೆ ಪ್ರಧಾನಿ ಮೋದಿ ನಮಿಸಿದ್ದಾರೆ. ಕಲಾಂರನ್ನು ನೆನೆದು ವಿಡಿಯೋ ಶೇರ್ ಮಾಡಿ, ನೀವು ಎಂದಿಗೂ ನಮಗೆ ಪ್ರೇರಣೆ ಎಂದು ಗೌರವ ಸಲ್ಲಿಸಿದ್ದಾರೆ.

ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ವಿನಮ್ರ ಶೃದ್ಧಾಂಜಲಿ. ಅವರು 21ನೇ ಶತಮಾನದಲ್ಲಿ ಸಮರ್ಥ ಮತ್ತು ಸಮೃದ್ಧ ಭಾರತದ ಕನಸು ಕಂಡು, ದೇಶಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿ ಎಲ್ಲರ ಪ್ರೀತಿ ಗಳಿಸಿದ್ದರು. ಅವರ ಆದರ್ಶ ಜೀವನ ಸದಾ ದೇಶವಾಸಿಗಳಿಗೆ ಸ್ಪೂರ್ತಿದಾಯಕ. ಕಲಾಂ ಅವರ ಜಯಂತೋತ್ಸವದಂದು ಇಡೀ ಭಾರತವೇ ಅವರಿಗೆ ನಮಿಸುತ್ತಿದೆ ಎಂದು ಮೋದಿ ಹಾಡಿ ಹೊಗಳಿದ್ದಾರೆ.

ಜೊತೆಗೆ ಅಬ್ದುಲ್ ಕಲಾಂ ಅವರ ಸಾಧನೆಯನ್ನು ಹೊಗಳಿ ವಿಶೇಷ ವಿಡಿಯೋವನ್ನು ಮೋದಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಇಡೀ ವಿಶ್ವವೇ ಮಿಸೈಲ್ ಮ್ಯಾನ್ ಜಯಂತಿ ದಿನದಂದು ಅವರಿಗೆ ಗೌರವ ಸಲ್ಲಿಸುತ್ತಿದೆ. ನೆಟ್ಟಿಗರು ಕಲಾಂ ಅವರ ಕೆಲವು ಕೋಟ್‍ಗಳನ್ನು ನೆನೆದು ಕಲಾಂ ಅವರಿಗೆ ಗೌರವ ಸಲ್ಲಿಸಿದ್ದಾರೆ.

abdul kalam 2

ಅಕ್ಟೋಬರ್ 15, 1931ರಲ್ಲಿ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ್ದರು. ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ ಅವರು ಮನೆ ಮನೆಗಳಿಗೆ ಪೇಪರ್ ಹಾಕುತ್ತ, ದುಡಿಯುತ್ತ ನಮ್ಮ ವಿದ್ಯಾಭ್ಯಾಸ ಮುಗಿಸಿದರು. ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಲಾಂ ಸಾಧನೆ ಮಾಡಿದರು. 1958ರಲ್ಲಿ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಮ್ಮ ಏರೋನಾಟಿಕ್ ಎಂಜಿನಿಯರಿಂಗ್ ಪೂರ್ಣಗೊಳಿಸಿ ಕಲಾಂ, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ(ಡಿಆರ್‌ಡಿಒ), ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಲ್ಲಿ(ಇಸ್ರೋ) ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಗಳಿಸಿದರು.

Dr Kalam 1

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಅವರು ಮಿಸೈಲ್ ಮ್ಯಾನ್ ಎಂದೇ ಖ್ಯಾತಿಗಳಿಸಿದರು. ಕೊನೆಗೆ ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಪದವಿ ಏರಿ, ಪೀಪಲ್ಸ್ ಪ್ರೆಸಿಡೆಂಟ್ ಆಗಿ ದೇಶವಾಸಿಗಳ ಪ್ರೀತಿ ಪಾತ್ರರಾದರು.

ಕಲಾಂ ಅವರಿಗೆ ವಿದ್ಯಾರ್ಥಿಗಳೆಂದರೆ ವಿಶೇಷ ಕಾಳಜಿ, ಅಕ್ಕರೆ. ಹೀಗಾಗಿ ಭವ್ಯ ಭಾರತದ ಭವಿಷ್ಯವಾದ ವಿದ್ಯಾರ್ಥಿಗಳೊಂದಿಗೆ ಅವರು ಹೆಚ್ಚಿನ ಸಮಯ ಕಳೆಯುತ್ತಿದ್ದರು. 2015ರ ಜುಲೈ 27 ರಂದು ಶಿಲ್ಲಾಂಗ್ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ಕಲಾಂ ಎಲ್ಲರನ್ನು ಅಗಲಿದರು.

abdul kalam 1

ವಿದ್ಯಾರ್ಥಿಗಳ ಮೇಲಿನ ಕಲಾಂ ಅವರ ಪ್ರೀತಿ, ಕಾಳಾಜಿ ಇಡೀ ವಿಶ್ವದ ಗಮನ ಸೆಳೆದಿತ್ತು. ದೇಶ ಕಂಡ ಒಂದೊಳ್ಳೆ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಉನ್ನತ ಜವಾಬ್ದಾರಿಯನ್ನು ನಿಭಾಯಿಸಿ ಮೆಚ್ಚುಗೆ ಪಡೆದಿದ್ದರೂ, ತಮ್ಮನ್ನು ತಾವು ಮೊದಲು ಶಿಕ್ಷಕನಾಗಿ ಗುರುತಿಸಿಕೊಳ್ಳಲು ಅವರು ಬಯಸುತ್ತಿದ್ದರು. ಆದ್ದರಿಂದ ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಬೇಕೆಂದು 2015ರಲ್ಲಿ ವಿಶ್ವಸಂಸ್ಥೆ ಕರೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *