ನವದೆಹಲಿ: ಬರ ಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆಗಳಿಗೆ ಬೆಂಗಳೂರಿನ ಕಲುಷಿತ ನೀರನ್ನು ಶುದ್ಧಿಕರಿಸಿ ನೀರು ಹರಿಸುವ ಕೆಸಿ ವ್ಯಾಲಿ(ಕೋರಮಂಗಲ- ಚಲ್ಲಘಟ್ಟ ವ್ಯಾಲಿ) ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಅಲ್ಲದೇ ಹೈಕೊರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಸುವಂತೆ ಸೂಚನೆ ನೀಡಿ, ವಿಚಾರಣೆ ಮುಗಿಯುವವರೆಗೂ ಯೋಜನೆ ಮುಂದುವರಿಸಬಹುದು ಎಂದು ತಿಳಿಸಿದೆ.
ಶಾಶ್ವತ ನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಿಂದ ವಿಚಾರಣೆ ನಡೆಸಿ ಯೋಜನೆ ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡಿದೆ. ಯೋಜನೆ ಮುಂದುವರಿಸಲು ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅಂಜನೇಯ ರೆಡ್ಡಿ ಸಲ್ಲಿಸಿದ್ದರು.
Advertisement
Advertisement
ವಿಚಾರಣೆ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಬರ ಪೀಡಿತ ಜಿಲ್ಲೆಗಳಾಗಿದ್ದು, ಇಲ್ಲಿ ಬೇರೆ ನೀರಿನ ಮೂಲ ಇಲ್ಲ. ಕೆ.ಸಿ ವ್ಯಾಲಿ ನೀರು ಭೂಮಿ ಒಳಗೆ ಸೇರಿದ ಮೇಲೆ ನೈಸರ್ಗಿಕವಾಗಿ ಸ್ವಚ್ಛವಾಗಲಿದೆ. ಹಾಗಾಗಿ ಯೋಜನೆ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರ ವಕೀಲರ ವಾದ ಮನ್ನಿಸಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಈ ಪ್ರಕರಣದ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆಗೆ ತುರ್ತು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.