ಕನ್ನಡದ ನಟಿ, ನಿರೂಪಕಿ ಅಪರ್ಣಾ (Aparna) ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪರ್ಣಾ ಅಂತಿಮ ದರ್ಶನ ಪಡೆದಿರುವ ಪದ್ಮಜಾ ರಾವ್, ಅವರ ಜೊತೆಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಟಿಯ ನಿಧನಕ್ಕೆ ಹಿರಿಯ ನಟಿ ಪದ್ಮಜಾ ರಾವ್ (Actress Padmaja Rao) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ:ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ ಅಪರ್ಣಾ ಅಂತ್ಯಕ್ರಿಯೆ
ಅಪರ್ಣಾ ಜೊತೆ ಇದ್ದಾಗ ನಾವು ತುಂಬಾ ನಕ್ಕಿದ್ದೇವೆ. ಕೆಲವು ಸಂಬಂಧಗಳು ವೃತ್ತಿಯಲ್ಲಿ ಸಹಕಲಾವಿದರಾಗಿ ಉಳಿದುಕೊಳ್ಳುತ್ತೇವೆ. ಆದರೆ ಕೆಲವರು ಅದನ್ನು ದಾಟಿ ಮುಂದೆ ಹೋಗುತ್ತಾರೆ. ‘ಮೂಡಲ ಮನೆ’ ಮತ್ತು ‘ಪ್ರೀತಿ ಇಲ್ಲದ ಮೇಲೆ’ ಸೀರಿಯಲ್‌ನಲ್ಲಿ ಅಪರ್ಣಾ ಜೊತೆ ಕೆಲಸ ಮಾಡಿದ್ದೇನೆ. 20 ವರ್ಷಗಳ ಗೆಳೆತನ ನಮ್ಮದು. ಕೆಲಸ ಬಿಟ್ಟು ಪ್ರತ್ಯೇಕವಾಗಿ ಸಿಕ್ಕಿದ್ದೇವೆ. ಶಾಪಿಂಗ್ ಮಾಡಿದ್ದೇವೆ, ಜೊತೆಯಾಗಿ ಕಾಲ ಕಳೆದಿದ್ದೇವೆ ಎಂದು ಅಪರ್ಣಾ ನೆನೆದು ಪದ್ಮಜಾ ರಾವ್ ಭಾವುಕರಾಗಿದ್ದಾರೆ.
View this post on Instagram
ಅಪರ್ಣಾ ನನ್ನ ತಂಗಿ ಹಾಗೆಯೇ ಆದರೆ ಅವಳ ಕೊನೆಯ ದಿನಗಳ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ನನಗೂ ಈ ವಿಚಾರ ತಿಳಿದಿರಲಿಲ್ಲ. ಈಗ ಅನಿಸುತ್ತೆ ಅದರಲ್ಲೂ ಅಪರ್ಣಾದು ದೊಡ್ಡ ಗುಣವಿದೆ. ಹೇಳಿಕೊಂಡರೆ ನಾವು ನೊಂದುಕೊಳ್ಳುತ್ತೇವೆ. ಅವಳ ಸಮಸ್ಯೆಯಂತೂ ನಾವು ಬಗೆಹರಿಸೋಕೆ ಸಾಧ್ಯವಿಲ್ಲ. ಯಾರ ನೋವು ಯಾರು ತೆಗೆದುಕೊಳ್ಳೋಕೆ ಆಗೋದಿಲ್ಲ. ಪಾಪ ಅದಕ್ಕೆ ಅವಳು ಈ ವಿಚಾರ ಯಾರಿಗೂ ತಿಳಿಸಲಿಲ್ಲ ಎಂದು ಪದ್ಮಜಾ ರಾವ್ ಮಾತನಾಡಿದ್ದಾರೆ. ನನ್ನ ಮತ್ತು ಅಪರ್ಣಾ ಸಂಬಂಧದಲ್ಲಿ ಇವತ್ತೇ ನಾನು ಇಷ್ಟು ಕಣ್ಣೀರು ಹಾಕ್ತಿರೋದು. ನಾವು ಯಾವತ್ತು ಅತ್ತು ಕರೆದು ಮಾಡಿಲ್ಲ ಎಂದಿದ್ದಾರೆ ಪದ್ಮಜಾ ರಾವ್.
ನನಗೆ ಮೆಟ್ರೋದಲ್ಲಿ ಅಪರ್ಣಾ ವಾಯ್ಸ್ ಕೊಟ್ಟಿದ್ದಾರೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಹೇಳಿದಕ್ಕೆ ನಾನು ಮೆಟ್ರೋದಲ್ಲಿ ಓಡಾಡಿದೆ. ಬಳಿಕ ಅವಳಿಗೆ ಕಾಲ್ ಮಾಡಿದ್ದೆ. ನನಗೆ ಯಾಕೆ ಹೇಳಿಲ್ಲ. ಮೆಟ್ರೋಗೆ ವಾಯ್ಸ್ ಕೊಟ್ಟಿದ್ಯಾ ಅಂತ ಎಂದೆ. ಅದಕ್ಕೆ, ಅದರಲ್ಲಿ ಹೇಳೋಕೆ ಏನಿಲ್ಲ ಪದ್ದು ಅಂದರು. ಅಷ್ಟು ಸರಳ ವ್ಯಕ್ತಿ ಅಪರ್ಣಾ ಎಂದು ಪದ್ಮಜಾ ರಾವ್ ಗಳಗಳನೆ ಅತ್ತಿದ್ದಾರೆ.