ಅಮರಾವತಿ: ದಿಶಾ ಪ್ರಕರಣದ ನಾಲ್ವರು ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸರು ಎನ್‍ಕೌಂಟರ್ ಮಾಡಿದನ್ನು ಪ್ರಶ್ನಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಆಂಧ್ರಪ್ರದೇಶ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಸಿನಿಮಾದಲ್ಲಿ ಎನ್‍ಕೌಂಟರ್ ಮಾಡಿದರೆ ಚಪ್ಪಾಳೆ ಹೊಡಿಯುತ್ತೇವೆ. ಆದರೆ ನಿಜವಾಗಿಯೂ ಎನ್‍ಕೌಂಟರ್ ಮಾಡಿದರೆ ವಿರೋಧಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಆರೋಪಿಗಳ ಹುಟ್ಟಡಗಿಸಿದ ತೆಲಂಗಾಣ ಪೊಲೀಸರ ಕಾರ್ಯವನ್ನು ಆಂಧ್ರ ಸಿಎಂ ಶ್ಲಾಘಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ಈ ಘಟನೆ ನನ್ನನ್ನು ಆಳವಾಗಿ ಸಂಕಟಕ್ಕೆ ದೂಡಿತ್ತು. ಒಬ್ಬ ತಂದೆಯಾಗಿ ಇಂತಹ ಘಟನೆಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಲಿ? ಕ್ರೂರಿಗಳಿಗೆ ಯಾವ ಶಿಕ್ಷೆ ಕೊಟ್ಟರೆ ಪೋಷಕರಿಗೆ ಪರಿಹಾರ ನೀಡಿದಂತಾಗುತ್ತದೆ ಎಂದು ನಾವು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹಾಗೂ ತೆಲಂಗಾಣ ಪೊಲೀಸರಿಗೆ ಹ್ಯಾಟ್ಸ್ ಆಫ್. ಕೆಸಿಎರ್ ಅವರು ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಆಂಧ್ರ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ದಿಶಾ ಪ್ರಕರಣದ ಆರೋಪಿಗಳ ಎನ್‍ಕೌಂಟರ್ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಜಗನ್ ಅವರು ವಿರೋಧಿಸಿದರು. ಸಿನಿಮಾಗಳಲ್ಲಿ ನಾಯಕ ಎನ್‍ಕೌಂಟರ್ ಮಾಡಿದರೆ ನಾವೆಲ್ಲಾ ಚಪ್ಪಾಳೆ ಹೊಡೆಯುತ್ತೇವೆ. ಆದರೆ ಅದೇ ಕೆಲಸವನ್ನು ಒಬ್ಬ ವ್ಯಕ್ತಿ ರಿಯಲ್ ಆಗಿ ಮಾಡಿದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕೆಲವರು ದೆಹಲಿಯಿಂದ ಬಂದು ಇದು ತಪ್ಪು ಎನ್ನುತ್ತಾರೆ. ಏಕೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಶಿಕ್ಷೆ ಸಂಬಂಧ ಬಲವಾದ ಕಾನೂನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಇದೇ ಅಧಿವೇಶನದಲ್ಲಿ ಆ ಮಸೂದೆಯನ್ನು ನಮ್ಮ ಸರ್ಕಾರ ಮಂಡಿಸಲಿದೆ ಎಂದು ಘೋಷಿಸಿದರು. ಜೊತೆಗೆ ಅದರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ 21 ದಿನಗಳಲ್ಲಿ ಮರಣದಂಡನೆ ವಿಧಿಸುವ ಬಗ್ಗೆ ಕೂಡ ಪ್ರಸ್ತಾಪವಿದೆ ಎಂದು ತಿಳಿಸಿದರು.